Advertisement

ಕೇಂದ್ರದಿಂದ ಜವಾಬ್ದಾರಿ ನುಣುಚಿಕೊಳ್ಳುವ ತಂತ್ರ

11:54 AM Jun 13, 2018 | Team Udayavani |

ಬೆಂಗಳೂರು: ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿರುವುದು ಮತ್ತು ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ 1054 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಬಗ್ಗೆ ಕೇಂದ್ರದ ವಿರುದ್ಧ ಕಿಡಿಕಾರಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ, ಕೇಂದ್ರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

ಅಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಮಾತಿನಂತೆ ಹೇಳುವುದಾದರೆ ಕೇಂದ್ರದಿಂದ ಜುಮ್ಲಾ ಬಾಕಿ ಇದೆ. ಲೆಕ್ಕ ಕೊಡಿ ಎಂದು ಕೇಳಬೇಕಾಗುತ್ತದೆ. ಆದರೆ, ಅವರಂತೆ ತಾವೇ ಬಾಕಿ ಉಳಿಸಿಕೊಂಡು ಬೇರೆಯವರ ಬಳಿ ಲೆಕ್ಕ ಕೇಳುವ ಗಿಮಿಕ್‌ ಮಾಡುವುದಿಲ್ಲ. ಅಂಕಿ ಅಂಶಗಳ ಸಹಿತ ಮಾತನಾಡುತ್ತೇವೆ ಎಂದು ಬಿಜೆಪಿ ವಿರುದ್ಧವೂ ಹರಿಹಾಯ್ದರು.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುದಾನ ಕಡಿಮೆ ಮಾಡಿಕೊಂಡೇ ಬಂದಿದೆ. 2013ರಲ್ಲಿ ರಾಜ್ಯದ ಪಾಲು 868 ಕೋಟಿ ರೂ. ಇದ್ದರೆ, ಕೇಂದ್ರದ ಪಾಲು 960 ಕೋಟಿ ರೂ. ಇತ್ತು.

ಆದರೆ, 2017-18ರಲ್ಲಿ ಕೇಂದ್ರದ ಪಾಲು 290 ಕೋಟಿಯಾಗಿದ್ದು, ರಾಜ್ಯದ ಪಾಲು 2094 ಕೋಟಿ ರೂಪಾಯಿಯಾಗಿದೆ. ಮೂರು ವರ್ಷದಲ್ಲಿ ಶೇ. 50-50ರಷ್ಟಿದ್ದ ಪಾಲು ಈಗ ಕೇಂದ್ರದಿಂದ ಶೇ. 12 ಮತ್ತು ರಾಜ್ಯದಿಂದ ಶೇ. 88ಕ್ಕೆ ಬಂದಿದೆ ಎಂದು ಹೇಳಿದರು.

ಅದೇ ರೀತಿ ಉದ್ಯೋಗ ಖಾತರಿಯಲ್ಲೂ ಕೇಂದ್ರ ರಾಜ್ಯಕ್ಕೆ 1054 ಕೋಟಿ ರೂ. ಬಾಕಿ ಉಳಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಸಾಲಗಾರನಾಗಿದೆ. ಈ ಕುರಿತು ಪತ್ರ ಬರೆದು ಹಣ ಬಿಡುಗಡೆಗೆ ಕೋರಿದರೂ ಕೇಂದ್ರದಿಂದ ಪ್ರತಿಕ್ರಿಯೆ ಇಲ್ಲ. ಶೀಘ್ರವೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದರು.

Advertisement

ಆನ್‌ಲೈನ್‌ ಮಾನಿಟರಿಂಗ ವ್ಯವಸ್ಥೆ: ಇಲಾಖೆಯಿಂದ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಅಧಿಕಾರಿಗಳನ್ನು ಕೇಳಿದರೆ ಸರಿ ಇದೆ ಎನ್ನುತ್ತಾರೆ. ಇದನ್ನು ತಪ್ಪಿಸಲು ರಾಜ್ಯದ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳ ಆನ್‌ಲೈನ್‌ ಮಾನಿಟರಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಚಿಂತಿಸಲಾಗಿದೆ.

ಈ ವ್ಯವಸ್ಥೆ ಜಾರಿಗೆ ಬಂದರೆ ಯಾವ ಶುದ್ಧ ನೀರಿನ ಘಟಕ ಪ್ರತಿನಿತ್ಯ ಎಷ್ಟು ನೀರು ವಿತರಣೆ ಮಾಡಿದೆ ಎಂಬ ಮಾಹಿತಿ ಬೆಂಗಳೂರಿನಲ್ಲೇ ಲಭ್ಯವಾಗುತ್ತದೆ. ಸಮಸ್ಯೆಯಾದರೂ ತಿಳಿಯುತ್ತದೆ. ಅಧಿಕಾರಿಗಳು ನಿರ್ಲಕ್ಷಿಸಿದರೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲು ಅನಕೂಲವಾಗುತ್ತದೆ ಎಂದರು.

ಭ್ರಷ್ಟಾಚಾರದ ವಿಚಾರದಲ್ಲಿ ಯಾರೂ ಅಪರಂಜಿಯಲ್ಲ: ನಾನೂ ಸೇರಿದಂತೆ ಭ್ರಷ್ಟಾಚಾರದ ವಿಚಾರದಲ್ಲಿ 24 ಕ್ಯಾರೆಟ್‌ ಅಪರಂಜಿಯಲ್ಲ. ಒಂದೊಮ್ಮೆ ನಾನು ಅಪರಂಜಿ ಎಂದು ಯಾರಾದರೂ ಹೇಳಿಕೊಂಡರೆ ಅದು ಆತ್ಮವಂಚನೆಯಾಗುತ್ತದೆ. ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದರು.

ಕಳೆದ 20 ವರ್ಷದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದು ಮುಚ್ಚಿಕೊಳ್ಳುವ ವಿಚಾರವಲ್ಲ. ಎಲ್ಲವೂ ಸರಿಯಾಗಿದೆ ಎಂದರೆ ನನ್ನನ್ನು ನಾನೇ ಮೂರ್ಖ ಎಂದುಕೊಂಡಂತೆ. ಭ್ರಷ್ಟಾಚಾರ ಎಲ್ಲ ಹಂತಗಳಲ್ಲೂ ವ್ಯಾಪಿಸಿದೆ. ಆದರೆ, ಅಧಿಕಾರದಲ್ಲಿರುವಷ್ಟು ದಿನ ಜನರಿಗೆ ವಂಚನೆಯಾಗದಂತೆ ಕೆಲಸ ಮಾಡಿದರೆ ಅದುವೇ ಸಮಾಜಕ್ಕೆ ಕೊಡುವ ದೊಡ್ಡ ಉಡುಗೊರೆ ಎಂದು ಮಾರ್ಮಿಕವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next