ಚಿಕ್ಕಮಗಳೂರು: ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಸಹೋದರಿ 2015ರಲ್ಲಿ ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಮತ್ತೋರ್ವ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಓದಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಶುಕ್ರವಾರ ತಿಳಿಸಿದ್ದಾರೆ.
ಯಶಸ್ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಾಯಿಯ ಜೊತೆ ಇದ್ದು, ಕೊಪ್ಪದಲ್ಲೇ 8ನೇ ತರಗತಿ ಓದುತ್ತಿದ್ದಾನೆ. 2015ರ ಫೆಬ್ರವರಿ 19ರಂದು ಶಿವಮೊಗ್ಗದಲ್ಲಿ ನಡೆದ ಪಿ.ಎಫ್.ಐ ಸಮಾವೇಶ ಮುಗಿಸಿಕೊಂಡು ಹೋಗುವಾಗ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ದುಷ್ಕರ್ಮಿಗಳು ವಿಶ್ವನಾಥ್ ಶೆಟ್ಟಿಯನ್ನ ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಸಾವಿನ ಕೆಲ ತಿಂಗಳ ಬಳಿಕ ಪತ್ನಿ ಕೂಡ ಸಾವನ್ನಪ್ಪಿದ್ದರು.
ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಅಜ್ಜಿಯ ಜೊತೆ ವಾಸವಿದ್ದಾನೆ. ಇಂದು ಅವರ ಮನೆಗೆ ಭೇಟಿ ನೀಡಿದ ಮೃತ ಹರ್ಷ ಸಹೋದರೆ ಅಶ್ವಿನಿ ಆ ಬಾಲಕನ ಓದಿನ ಜವಾಬ್ದಾರಿ ವಹಿಸಿಕೊಂಡು, ಅವನ ಓದಿನ ಜೊತೆ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ನಾನೇ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಸಿದ್ದಗಂಗಾ: ವಾಜಪೇಯಿ ಮಾತು ನೆನೆದ ಅಮಿತ್ ಶಾ
ನಿಮಗೆ ಏನಾದರೂ ಬೇಕಾದರೆ ನನಗೆ ಕರೆ ಮಾಡಿ. ಅಜ್ಜಿ ಹಾಗೂ ಯಶಸ್ ಅವರ ಇಬ್ಬರ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿ ಕೂಲಿ ಕೆಲಸ ಮಾಡಿಕೊಂಡು ಯಶಸ್ ಹಾಗೂ ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದರು.