Advertisement

ಮಕ್ಕಳ ರಕ್ಷಣೆ-ಸರ್ವರ ಜವಾಬ್ದಾರಿ

07:14 PM Apr 03, 2017 | Team Udayavani |

ಉಡುಪಿ: ಮಕ್ಕಳ ರಕ್ಷಣೆ ವಿಚಾರ ಬಂದಾಗ ಪೊಲೀಸ್‌ ಇಲಾಖೆ ಪ್ರಮುಖ ಪಾತ್ರ ವಹಿಸಿಕೊಂಡರೂ, ಇಲ್ಲಿ ಇತರ ಇಲಾಖೆ ಹಾಗೂ ಸರ್ವ ನಾಗರಿಕರ ಜವಾಬ್ದಾರಿ ಕೂಡ ಇದೆ. ರಾಷ್ಟ್ರೀಯ ಅಪರಾಧ ಸಂಖ್ಯೆಗಳ (ನ್ಯಾಷನಲ್‌ ಕ್ರೈಂ ಡೇಟಾ) ಆಧಾರದಲ್ಲಿ ಕಳೆದ 10 ವರ್ಷಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯಗಳು ಏರಿಕೆಯಾಗಿವೆ. ಇದು ಕಳವಳಕಾರಿ ಸಂಗತಿ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಉಮಾ ಎಂ.ಜಿ. ತಿಳಿಸಿದ್ದಾರೆ.

Advertisement

ಎ. 2ರಂದು ಮಣಿಪಾಲದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಅಭಿಯೋಗ ಇಲಾಖೆ, ಜಿಲ್ಲಾ ವಕೀಲರ ಸಂಘ ಮತ್ತು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಕುಂಜಿಬೆಟ್ಟು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ಸ್ನೇಹಿ ಕಾನೂನು ಸೇವೆಗಳು ಮತ್ತು ಮಕ್ಕಳ ರಕ್ಷಣೆ ಯೋಜನೆ-2015 ಇದರಡಿ ಪೊಲೀಸರು ಮತ್ತು ಸಾರ್ವಜನಿಕರ ಪಾತ್ರದ ಕುರಿತ 1 ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟುತ್ತಾ ಯಾರೂ ಅಪರಾಧಿಗಳಾಗಿರುವುದಿಲ್ಲ. ಮಕ್ಕಳು ಬೆಳೆಯುವ ಪರಿಸರವೂ ಭವಿಷ್ಯದ ನಡವಳಿಕೆಯಲ್ಲಿ ಪರಿಣಾಮ ಬೀರುತ್ತದೆ. ಅರಿವಿಗೆ ಬರುವ ಮೊದಲೇ ಅವರು ಅನ್ಯ ಹಾದಿಯಲ್ಲಿ ಸಾಗಿರುತ್ತಾರೆ. ಮಕ್ಕಳನ್ನು ನಾವು ನೋಡುವ ದೃಷ್ಟಿಕೋನವೇ ಬದಲಾಗಬೇಕು. ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಯಾಗಬೇಕು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 40ರಷ್ಟು ಮಂದಿ 18 ವರ್ಷದೊಳಗಿನವರಿದ್ದಾರೆ. ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯಿದ್ದರೂ, ಕೆಲ ಕಡೆಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ತೊಡಗಿರುವ ಮಕ್ಕಳು, ಶೋಷಣೆಗೆ ಒಳಗಾದ ಮಕ್ಕಳು ಹಾಗೂ ಅಸಹಾಯಕ ಮಕ್ಕಳನ್ನು ತಾತ್ಸಾರ ಮನೋಭಾವನೆಯಿಂದ ನೋಡುತ್ತಾರೆ. ಪೊಲೀಸರು ಮಕ್ಕಳ ಮನಸ್ಥಿತಿಯನ್ನು ಅರಿತು ಅವರೊಂದಿಗೆ ಬೆರೆತು ವಿಚಾರಣೆ ನಡೆಸಬೇಕು ಎಂದರು.

“ಹಿಂಸಾತ್ಮಕ ಪ್ರತಿಭಟನೆ ನಡೆಸಬೇಡಿ’
ಯಾವುದೇ ಘಟನೆಗಳಾದ ಸಾರ್ವಜನಿಕರು ತಕ್ಷಣ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೈದು ಹಿಂಸಾತ್ಮಕ ಪ್ರತಿ ಭಟನೆ ಮಾಡಬಾರದು. ಈ ಸಂದರ್ಭ ಆಗುವ ಕೆಲವು  ಸನ್ನಿವೇಶಗಳಿಂದ ಸಾಕ್ಷ್ಯ ನಾಶವಾಗಿ ಅಪರಾಧಿ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗು
ತ್ತದೆ. ಪೊಲೀಸರು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದವರು ಹೇಳಿದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಶಿವರಾಂ ಕೆ., ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ| ಪ್ರಕಾಶ್‌ ಕಣಿವೆ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಡಾ| ವನಿತಾ ತೊರವಿ, ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಉಪಸ್ಥಿತರಿದ್ದರು.

Advertisement

 ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಎನ್‌. ಸ್ವಾಗತಿಸಿದರು. ಎಸ್‌.ಪಿ. ಕಚೇರಿಯ ಬಿ. ಮನಮೋಹನ ರಾವ್‌ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ವಂದಿಸಿದರು.

ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ
ಆರೋಪಿಯು ನಿರಪರಾಧಿಯಾದರೆ ಅದನ್ನು ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್‌ ಗುಜರಾತ್‌ನ ಪ್ರಕರಣವೊಂದಕ್ಕೆ ಸಂಬಂಧಿಸಿ ನೀಡಿದ ಆದೇಶವನ್ನು ಪೂರಕವಾಗಿಟ್ಟುಕೊಂಡು ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲು ನಿರ್ದೇಶನ ಮಾಡಿದೆ. ನಿರಪರಾಧಿಯಾದರೆ ಬೇರೆ ಯಾರು ಕಾರಣ? ತನಿಖೆಯಲ್ಲಿ, ನ್ಯಾಯಾಂಗದಲ್ಲಿ ಎಲ್ಲಿ ತಪ್ಪಾಗಿದೆಯೇ? ನ್ಯಾಯ ವ್ಯವಸ್ಥೆ ಎಡವಿದ್ದೆಲ್ಲಿ? ಇನ್ನಿತರ ಅಂಶಗಳನ್ನು ಪರಿಶೀಲನೆ ನಡೆಸಿ ವ್ಯವಸ್ಥೆಯ ಲೋಪಗಳನ್ನು ಕಂಡುಹಿಡಿಯಲು ಸಮಿತಿ ರಚಿಸಲು ಕೋರ್ಟ್‌ ತಿಳಿಸಿದೆ ಎಂದು ಉಮಾ ಎಂ.ಜಿ. ಹೇಳಿದರು.

“ಇಲಾಖೆಗಳ ನಡುವೆ ಸಮನ್ವಯ ಇರಲಿ’
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕ ಅವರು ಮಾತನಾಡಿ, ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲು ಪೊಲೀಸರು, ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಾರ್ವಜನಿಕರು ಕೂಡ ಪ್ರಯತ್ನಿಸಬೇಕು. ಮಕ್ಕಳ ರಕ್ಷಣೆಯ ವಿಷಯದಲ್ಲಿ ಎಲ್ಲ ಇಲಾಖೆಯವರು ಪರಸ್ಪರ ಸಹಕಾರ, ಸಮನ್ವಯದಿಂದ ಜವಾಬ್ದಾರಿ, ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಹೇಳಿದರು.

“ಚೈಲ್ಡ್‌ ಟಾಸ್ಕ್ಫೋರ್ಸ್‌-ಚಿಂತನೆ
ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳಿವೆ. ಈ ಕಾನೂನಿನ ಅರಿವು ಎಲ್ಲರಿಗೂ ಇರಬೇಕು. ಕಾನೂನು ಜಾರಿಗೆ ತರುವುದು ಮಾತ್ರವಲ್ಲ. ಅದರ ಸಮರ್ಪಕ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಮಕ್ಕಳ ರಕ್ಷಣೆ ಅವರಿಗೆ ಶಿಕ್ಷೆಗೆ ದೂಡಿದಂತೆ ಅನಿಸುವಂತಾಗಬಾರದು. ಇದಕ್ಕಾಗಿ ಅಧಿಕಾರಿಗಳಿಗೆ ಮಾನಸಿಕ ತರಬೇತಿಯೂ ನೀಡಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಸಮಗ್ರ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಘಟಕದ (ಸಿಡಬ್ಲೂಸಿ) ಜತೆಗೆ ಸೇರಿಕೊಂಡು ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗೆ ಆಯಾ ಹಂತದಲ್ಲೇ ಪರಿಹಾರ ನೀಡಲು ಚೈಲ್ಡ್‌ ಟಾಸ್ಕ್ಫೋರ್ಸ್‌ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ

“ಮಕ್ಕಳ ವಿಚಾರಣೆಗೆ ಪ್ರತ್ಯೇಕ ಘಟಕ: ಎಸ್‌ಪಿ’
 ಮಕ್ಕಳ ಜತೆಯಲ್ಲಿ ಮಾತನಾಡುವಾಗ ಮನಸ್ಥಿತಿ ಸ್ಥಿರವಾಗಿರಬೇಕು. ಆರೋಪಿ, ಅಪರಾಧಿಗಳ ಜತೆಗಿನ ಒಂದು ರೀತಿ ವರ್ತನೆಯ ಮಧ್ಯೆ ಮಕ್ಕಳು ಬಂದಾಗ ಸಂಯಮದಿಂದ ವರ್ತಿಸಬೇಕಾದ ಸಂದಿಗ್ಧತೆ ಪೊಲೀಸರಲ್ಲಿ ಬರುತ್ತದೆ. ಮಕ್ಕಳ ರಕ್ಷಣೆ ಕುರಿತಂತೆ ಜಿಲ್ಲೆಯ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ವಿಚಾರಣೆಗಾಗಿ ಪ್ರತಿ ಠಾಣೆಯಲ್ಲಿ ಪ್ರತ್ಯೇಕ ಘಟಕ ಪ್ರಾರಂಭಿಸಲಾಗಿದೆ. ನೋಡಲ್‌ ಅಧಿಕಾರಿಗಳ ನೇಮಕವೂ ಮಾಡಲಾಗಿದೆ.
ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next