ಏನೋ ಒಂದು ಯೋಚನೆ ಮನಸ್ಸನ್ನು ಕಾಡುತ್ತಿತ್ತು. ಯಾರಿಗೆ ಹೇಳ ಬೇಕು, ಹೇಗೆ ಹೇಳಬೇಕು, ಕೇಳುವವರು ಯಾರು- ಹೀಗೆ ಹಲವು ಪ್ರಶ್ನೆಗಳು. ಆ ಲೋಕದಿಂದಲೇ ಹೊರ ಬರಬೇಕು ಎಂಬ ಭಾವನೆ ಶುರುವಾಯಿತು.ಹೌದು, ಆ ಯೋಚನೆಯಲ್ಲಿ ನಾನು ನನ್ನನ್ನು ಮರೆತು ಬಿಟ್ಟಿದ್ದೆ. ಆ ವಿಷಯದಲ್ಲಿ ಮನಸ್ಸು ನೋವಿನಿಂದ ತುಂಬಿದ್ದರೆ, ಬಾಯಿಯಿಂದ ಮಾತುಗಳೇ ಹೊರಡುತ್ತಿರಲಿಲ್ಲ. ಕಣ್ಣೀರು ಬರುವಂತಿದ್ದರೂ ಕೂಡ ಕಣ್ಣುಗಳಲ್ಲಿ ನೀರು ಬತ್ತಿಹೋದಂತಾಗುತ್ತಿತ್ತು. ಹೇಳಿಕೊಳ್ಳಲಾಗದೇ, ಸಹಿಸಿಕೊಳ್ಳಲಾಗದೇ ಮನಸ್ಸು ಒದ್ದಾಡುತ್ತಿತ್ತು. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ದಂತೆ ಭಾಸವಾಗಿತ್ತು.
ಆ ನೋವು ಎಂಥದ್ದು, ಸುಖವೋ, ದುಃಖವೋ ಎನ್ನುವುದು ಗೊತ್ತಿರಲಿಲ್ಲ. ಸುಮ್ಮನೇ ಕುಳಿತರೆ ಅದೇ ನೋವು, ಖುಷಿಯಿಂದ ಇದ್ದರೆ ಮರುಕಳಿಸಿ ಬರುವಂತಹ ಯೋಚನೆ, ನೋವು. ಇದು ಯಾಕೆ ಹೀಗಾಗುತ್ತಿದೆ ಎಂದು ಯೋಚಿಸುತ್ತಿರುವಾಗ ನಂತರ ನನಗೆ ಅರಿವಾದ ದ್ದು, ನನಗೆ ಜವಾಬ್ದಾರಿ ಬಂದಿದೆ, ಅದು ಮೈತುಂಬ ತುಂಬಿದೆ ಎಂದು.
ಅಬ್ಟಾ! ಅಂತಹ ಶಕ್ತಿಯೇ? ಒಂದೇ ವಸ್ತುವನ್ನು ದಿಟ್ಟಿಸುತ್ತ ನೋಡುತ್ತಲೇ, ನಿಶ್ಯಬ್ದವಾದ ವಾತಾವರಣವನ್ನು ಹುಟ್ಟಿಸುವಂಥದ್ದೇ ಈ ಜವಾಬ್ದಾರಿ. ಅದನ್ನು ನಿಭಾಯಿಸುವುದು ಹೇಗೆ, ತಿಳಿಯದಂತಾಗಿ ಹೋಗಿತ್ತು. ಅದನ್ನು ಎದುರಿಸುವ ಶಕ್ತಿ ದೇವರು ನನಗೆ ಯಾಕೆ ಕೊಟ್ಟಿಲ್ಲ, ನಾನೇನು ತಪ್ಪು ಮಾಡಿದೆ ಎಂದು ನೂರಾರು ಯೋಚನೆಗಳ ಸಾಲು. ನೋವು-ಮೌನ ಸಾಮಾನ್ಯವಾಗಿತ್ತು. ಯಾರೊಂದಿಗೂ ಮಾತನಾಡದೇ ಎದುರಿಸುವ ದಾರಿ ಹುಡುಕಬೇಕೆನಿಸುತ್ತಿತ್ತು. ಎದೆಯೊಳಗೆ ಸೂಜಿಯಿಂದ ಚುಚ್ಚುವಂತೆ ಭಾಸವಾಗುತ್ತಿತ್ತು. ಯಾವುದೂ ಬೇಡ ಎಲ್ಲವನ್ನು ಕೈಬಿಟ್ಟು ಕುಳಿತುಬಿಡುವ ಎಂದು ಅನಿಸಿತ್ತು. ಆದರೂ ಯಾರೋ ನೆನಪಾದಾಗ ಆ ಜವಾಬ್ದಾರಿಯನ್ನು ಎದುರಿಸಲೇಬೇಕೆಂಬ ಮನವರಿಕೆಯಾಗುತ್ತಿತ್ತು.
ಏಕೆ ಹೀಗೆ ನನ್ನನ್ನು ಕಳೆದುಕೊಳ್ಳುವಂತಾಗಿದೆ. ಎಷ್ಟರ ಮಟ್ಟಿಗೆಂದರೆ ನಮ್ಮವರು ನನ್ನಿಂದ ದೂರವಾಗುತ್ತಾರೇನೋ ಎಂಬ ಅವ್ಯಕ್ತ ಭಯ ಕಾಡುತ್ತಿತ್ತು. ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ನನಗೆ ಯಾರೋ ಒಬ್ಬರು ತಟ್ಟಿ ಎಚ್ಚರಿಸಿದಂತಾಯಿತು. ಯೋಚನೆಯಿಂದ ಹೊರಬಂದು ನೋಡಿದರೆ ಕಂಡದ್ದು ನನ್ನ ಅಮ್ಮ. ಆಶ್ಚರ್ಯದಿಂದ ನೋಡಿದರೆ ಸೂರ್ಯ ಪ್ರಜ್ವಲಿಸುತ್ತಿದ್ದ. ನಂತರ ನನಗೆ ಗೊತ್ತಾಗಿದ್ದು ನಾನು ಕಂಡಿದ್ದು ಒಂದು ದೊಡ್ಡ ಕನಸು ಎಂದು. ನನ್ನ ಮನಸ್ಸು ಒಮ್ಮೆಗೆ ಹಗುರವಾಯಿತು.
ಆ ಜವಾಬ್ದಾರಿ ಎಂತಹ ಒತ್ತಡಕ್ಕೆ ನನ್ನನ್ನು ಸಿಲುಕಿಸಿತ್ತು. ನಿಟ್ಟುಸಿರು ಬಿಟ್ಟು ಕಣ್ಣುಜ್ಜಿಕೊಂಡು ಹಾಸಿಗೆಯಿಂದ ಎದ್ದು ಕುಳಿತೆ. ದಿನ ಆರಂಭವಾಗಿತ್ತು.
-ಮಹಾದೇವಿ
ತೃತೀಯ ಪತ್ರಿಕೋದ್ಯಮ
ವಿ.ವಿ. ಕಾಲೇಜು, ಮಂಗಳೂರು