ದಾವಣಗೆರೆ: ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇ-ಟೆಂಡರ್ ಮೂಲಕ ಮೆಕ್ಕೆಜೋಳ ಮಾರಾಟ ಪ್ರಕ್ರಿಯೆಗೆ ಪ್ರಾರಂಭಿಕ ಹಂತದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ರಾಜ್ಯದ ಮೆಕ್ಕೆಜೋಳದ ಕಣಜ’ ಖ್ಯಾತಿಯ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬರುವಂತಾಗಬೇಕು, ರೈತರಿಗೆ ಸ್ಪರ್ಧಾತ್ಮಕ ಧಾರಣೆ ದೊರೆಯುವಂತಾಗಬೇಕು ಎಂದು ಜ.17ರ ಸೋಮವಾರದಿಂದ ಇ-ಟೆಂಡರ್ ಮೂಲಕ ಮೆಕ್ಕೆಜೋಳ ಮಾರಾಟ ಮತ್ತು ಖರೀದಿಗೆ ಚಾಲನೆ ನೀಡಲಾಗಿದೆ.
ಜ.20ರ ಅಂತ್ಯಕ್ಕೆ 8,091 ಚೀಲ ಮೆಕ್ಕೆಜೋಳ ಇ-ಟೆಂಡರ್ ಮೂಲಕ ಮಾರಾಟವಾಗಿದೆ. ರೈತರಿಗೆ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ 1620 ರೂ.ಗಳಿಂದ 1822 ರೂ.ವರೆಗೆ ಬೆಲೆಯೂ ಸಿಕ್ಕಿದೆ. ದಾವಣಗೆರೆ ಎಪಿಎಂಸಿಯಲ್ಲಿ ಇ-ಟೆಂಡರ್‌ಗೆ ಚಾಲನೆ ನೀಡಿದ ಮೊದಲ ದಿನವಾದ ಸೋಮವಾರ 3056 ಚೀಲ ಮೆಕ್ಕೆಜೋಳ ಅವಕವಾಗಿತ್ತು. ಕ್ವಿಂಟಲ್‌ಗೆ ಕನಿಷ್ಟ 1620 ರಿಂದ 1804 ರೂ.ವರೆಗೆ ಧಾರಣೆ ನಡೆದಿತ್ತು. ಜ.18ರಂದು ಮಂಗಳವಾರ 1992 ಚೀಲ ಮೆಕ್ಕೆಜೋಳ ಬಂದಿದ್ದು, 1680ರಿಂದ 1813 ರೂ.ವರೆಗೆ ಮಾರಾಟ ನಡೆದಿತ್ತು. ಜ.19ರಂದು ಬುಧವಾರ 1802 ಚೀಲ ಬಂದಿದ್ದು, 1650ರಿಂದ 1841ರೂ.ತನಕ ಮಾರಾಟ ನಡೆಯಿತು. ಜ.20ರ ಗುರುವಾರ 1241 ಚೀಲ ಮೆಕ್ಕೆಜೋಳ ಬಂದಿದ್ದು 1749ರಿಂದ 1822 ರೂ. ವರೆಗೆ ಧಾರಣೆ ಇತ್ತು. ಎಪಿಎಂಸಿಯಲ್ಲಿ ಇ-ಟೆಂಡರ್ ಮೂಲಕ ಮೆಕ್ಕೆಜೋಳ ಮಾರಾಟ-ಪ್ರಕ್ರಿಯೆ ನಡೆಯುವುದರಿಂದ ರೈತರಿಗೆ ಅನುಕೂಲ ಆಗುತ್ತದೆ.
ದಲ್ಲಾಲರು, ವರ್ತಕರು, ಖರೀದಿದಾರರು ಮನೆ, ಹೊಲಗಳಿಗೆ ಹೋಗಿ ಖರೀದಿ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು. ಹೊಲ ಇಲ್ಲವೇ ಮನೆಯ ಬಾಗಿಲಲ್ಲೇ ಖರೀದಿ ಮಾಡುವುದರಿಂದ ಮಾರ್ಕೆಟ್‌ಗೆ ಹೋಗುವುದು ತಪ್ಪುತ್ತದೆ. ಪಾರ್ಟಿ(ಖರೀದಿದಾರರು) ನೇರವಾಗಿ ಹಣ ಕೈಗೆ ಕೊಡುವುದರಿಂದ ಮಾಲ್ ಕೊಟ್ಟು ದುಡ್ಡಿಗೆ ಅಲೆಯುವುದೂ ತಪ್ಪುತ್ತದೆ ಎಂದು ಅನೇಕ ರೈತರು, ಖರೀದಿದಾರರು ಹೇಳುವಂತಹ ಧಾರಣೆಗೆ ಮಾರಾಟ ಮಾಡುವುದು ನಡೆಯುತ್ತಿದೆ. ಆದರೆ ಇ-ಟೆಂಡರ್‌ನಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ ಎನ್ನುತ್ತಾರೆ ದಾವಣಗೆರೆ ಎಪಿಎಂಸಿ ಸಹಾಯಕ ನಿರ್ದೇಶಕ ಜೆ. ಪ್ರಭು.
ಇ-ಟೆಂಡರ್‌ನಲ್ಲಿ 8-10 ವರ್ತಕರು ಭಾಗವಹಿಸುವುದಲ್ಲದೆ ಆವಕದ ಗುಣಮಟ್ಟ ಆಧರಿಸಿ ಬೆಲೆ ನಿಗದಿ ಪಡಿಸುವುದು ಮತ್ತು ಒಬ್ಬ ವರ್ತಕ ಬಿಡ್ ಮಾಡಿರುವ ಮೊತ್ತ ಇನ್ನೊಬ್ಬ ವರ್ತಕನಿಗೆ ಗೊತ್ತಾಗದೇ ಇರುವ ಕಾರಣಕ್ಕೆ ರೈತರಿಗೆ ಸ್ಪರ್ಧಾತ್ಮಕ ಧಾರಣೆ ದೊರೆಯಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಇ-ಟೆಂಡರ್‌ಗೆ ರೈತರು ಮಾತ್ರವಲ್ಲ ವರ್ತಕರು, ದಲ್ಲಾಲರು ಎಲ್ಲರೂ ಹೊಂದಿಕೊಳ್ಳುವ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಬಹು ದಿನಗಳ ನಂತರವಾದರೂ ಮೆಕ್ಕೆಜೋಳಕ್ಕೆ ಪ್ರಾರಂಭವಾಗಿರುವ ಇ-ಟೆಂಡರ್ ಪ್ರಕ್ರಿಯೆ “ಮೆಕ್ಕೆಜೋಳದ ಕಣಜ’ ಖ್ಯಾತಿಯ ಜಿಲ್ಲೆಯ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.