ರಾಯಬಾಗ: ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಜಾನಪದ ಮತ್ತು ಬಯಲಾಟ ಕಲಾವಿದರಿಗೆ ನೀಡುವ ಮಾಸಾಶ ಹೆಚ್ಚಿಸಬೇಕು ಹಾಗೂ ಕಲಾವಿದರಿಗಾಗಿ ಉತ್ಸವಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕಿನ ಬಯಲಾಟ ಮತ್ತು ಜಾನಪದ ಕಲಾವಿದರು ಸರಕಾರಕ್ಕೆ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಲಾವಿದರು, ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿ ಸಂದರ್ಶನ ಆದರೂ ಕೂಡ ಇನ್ನುವರೆಗೆ ಮಾಶಾಸನ ಮಂಜೂರು ಮಾಡಿಲ್ಲ. ಇದರಿಂದ ಬಡ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನಪದ ಕಲೆ ಉಳಿಯುವಿಗಾಗಿ ಶ್ರಮಿಸುತ್ತಿರುವ ಕಲಾವಿದರಿಗೆ ಸರಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರು ನಿಧನರಾಗಿ 13 ತಿಂಗಳು ಕಳೆದರೂ, ಆ ಸ್ಥಾನಕ್ಕೆ ಇನ್ನುವರೆಗೂ ಯಾರನ್ನು ನೇಮಕ ಮಾಡದೇ ಸರಕಾರ ಬಯಲಾಟ ಕಲಾವಿದರೊಂದಿಗೆ ಮಲತಾಯಿ ಧೋರಣೆ ತಾಳುತ್ತಿದೆ. ಇದರಿಂದ ಬಯಲಾಟ ಕಲಾವಿದರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಈಗಾಗಲೇ ಮಾಸಾಶನ ಪಡೆಯುತ್ತಿರುವ ಕಲಾವಿದರಿಗೆ ಪ್ರತಿ ತಿಂಗಳು ಉಪಖಜಾನೆ ಮೂಲಕ ದೊರೆಯುವಂತೆ ಸರಕಾರ ಆದೇಶ ಮಾಡಬೇಕು. ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಎಲ್ಲ ಶಾಸಕರು ಕಲಾವಿದರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕೆಂದು ಒತ್ತಾಯಿಸಿದರು.
ಸಮಸ್ಯೆಗಳಿಗೆ ಸರಕಾರ ಸೂಕ್ತ ಸ್ಪಂದಿಸದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಸುವರ್ಣ ವಿಧಾನಸೌಧ ಎದುರು ಕುಳಿತು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕಿನ ಕಲಾವಿದರಾದ ಸಂಗಪ್ಪ ವಳಕಲ್ಲೆ, ಶಂಕರ ಕರಿಗಾರ, ರಾಜು ಭಜಂತ್ರಿ, ಮಾರುತಿ ಮಾಂಗ ಇತರರಿದ್ದರು.