ನಿಡಗುಂದಿ: ಕಂದಾಯ ದಿನಾಚರಣೆ ಅಂಗವಾಗಿ ಹಸಿರೋತ್ಸವ ಕಾರ್ಯಕ್ರಮಕ್ಕೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಪಂ ಆವರಣದಲ್ಲಿ ಸಸಿ ನೆಟ್ಟು ಚಾಲನೆ ನೀಡಲಾಯಿತು.
ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ರಾಜ್ಯ ಗ್ರಾಮ ಲೆಕ್ಕಾ ಧಿಕಾರಿಗಳ ಸಂಘ ಆಯೋಜಿಸಿದ್ದ ಹಸಿರೋತ್ಸವ ಕಾರ್ಯಕ್ರಮದಲ್ಲಿ ಸಿಇಒ ಗೋವಿಂದರೆಡ್ಡಿ, ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ, ವಿವಿಧ ಬಗೆ ಸಸಿ ನೆಟ್ಟು ನೀರೆರೆಯುವ ಮೂಲಕ ಕಂದಾಯ ದಿನಾಚರಣೆಗೆ ಚಾಲನೆ ನೀಡಿದರು. ಹಸಿರೋತ್ಸವ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಮಾತನಾಡಿ, ಎಲ್ಲ ಇಲಾಖೆಗಳ ಮಾತೃ ಇಲಾಖೆ ಕಂದಾಯ ಇಲಾಖೆಯಾಗಿದೆ.
ಇದರ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಜನರ ತೊಂದರೆಯಲ್ಲಿ ಭಾಗಿಯಾಗಿ ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸುತ್ತವೆ. ಜನರ ಕಷ್ಟಕ್ಕೆ ಸ್ಪಂದಿಸಿ ಜನರ ಒಡನಾಡಿಯಾಗಿರುತ್ತವೆ. ಪ್ರವಾಹ, ಕೋವಿಡ್ ನಿರ್ವಹಣೆಯಲ್ಲಿ ಕಂದಾಯ ಇಲಾಖೆ ಪಾತ್ರ ಅಗ್ರಗಣ್ಯವಾಗಿದೆ. ಸೋಂಕು ಹೆಚ್ಚಳವಾಗಿದ್ದರೂ ಧೈರ್ಯದಿಂದ ಹೊರಬಂದು ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು. ಕಂದಾಯ ಇಲಾಖೆ ದಿನಾಚರಣೆ ನಿಮಿತ್ತ ಹಸಿರೋತ್ಸವ ಕಾರ್ಯಕ್ರಮ ಜನ ಮೆಚ್ಚುಗೆ ವ್ಯಕ್ತಪಡಿಸುವಂತಾಗಬೇಕು.
ಹಚ್ಚಿದ ಸಸಿಗಳು ಬೆಳೆದು ಉತ್ತಮ ಫಲಗಳನ್ನು ನೀಡುತ್ತಿದ್ದರೆ ಕಾರ್ಯಕ್ರಮ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಸಿಬ್ಬಂದಿ ಜತೆಗೆ ಜನರ ಸಹಕಾರ ಅತ್ಯಾವಶ್ಯಕವಾಗಿದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಎದುರಾದ ಸಮಯದಲ್ಲಿ ಮರಗಳ ಪಾತ್ರ ಗೊತ್ತಾಗಿದೆ. ಒಂದೊಂದು ಮರ ಜನರಿಗೆ ಸಾಕಷ್ಟು ಆಮ್ಲಜನಕವನ್ನು ಉಚಿತವಾಗಿ ನೀಡುತ್ತವೆ.
ಅವುಗಳನ್ನು ಬೆಳೆಸಿ ಪೋಷಿಸುವ ಕಾರ್ಯದಲ್ಲಿ ನಾವುಗಳು ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದರು. ಉಪತಹಶೀಲ್ದಾರ್ ಕೆ.ವೈ ಹೊಸಮನಿ, ತಾಪಂ ಇಒ ವಿ.ಎಸ್ ಹಿರೇಮಠ, ಶಿರಸ್ತೇದಾರ ಮಹೇಶ ಮೋಹಿತೆ, ಶಿವಾನಂದ ಅವಟಿ, ರಾಮನಗೌಡ ಪಾಟೀಲ, ಬಿಇಒ ಬಸವರಾಜ ತಳವಾರ, ಸಲೀಂ ಎಲಗೊಡ್, ಎನ್.ಎ ಸುತಾರ್, ಎಸ್.ಡಿ ಮಾಶಾಳ, ಯೋಜನಾ ಧಿಕಾರಿ ಎ.ಬಿ. ಮನಿಯಾರ್, ರಮೇಶ ಹಳಬರ, ನಾನಾಗೌಡ ಪಾಟೀಲ, ಶ್ರೀಕಾಂತ್ ವಾಲಿಕಾರ, ಶಿವಾನಂದ ಹಂಚನಾಳ, ಕಂದಾಯ ಇಲಾಖೆ, ತಾಪಂ ಇಲಾಖೆ ಸಿಬ್ಬಂದಿ ಇದ್ದರು.