Advertisement

ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ

01:00 PM Oct 27, 2018 | |

ಮುದ್ದೇಬಿಹಾಳ: ವಿಜಯಪುರ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಶೆಟ್ಟೆಣ್ಣವರ ಶುಕ್ರವಾರ ಮುದ್ದೇಬಿಹಾಳ ಪಟ್ಟಣಕ್ಕೆ ದಿಢೀರ್‌ ಭೇಟಿ ನೀಡಿ ಹಳೆ ನ್ಯಾಯಾಲಯ ಕಟ್ಟಡ, ಪುರಸಭೆ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.

Advertisement

ಮೊದಲಿಗೆ ಇಲ್ಲಿನ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಕಚೇರಿ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿದರು. ನಂತರ ಪುರಸಭೆಯಿಂದ ನಡೆದ ಕಾಮಗಾರಿಗಳ ಬಗ್ಗೆ ಪ್ರಗತಿ ಹಂತದ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ ನಿತ್ಯ ಕಾರ್ಯಾಲಯಕ್ಕೆ ಬರುವ ಸಾರ್ವಜನಿಕರ ಮನವಿಗೆ ಸರಿಯಾಗಿ ಸ್ಪಂಧಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳು ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ರಾಮೋಡಗಿ ಎನ್ನುವರು ತಮಗೆ ಮನೆ ಉತಾರಿ ಪೂರೈಸಬೇಕು ಎಂದು ಕಳೆದ 3 ತಿಂಗಳ ಹಿಂದೆಯೆ ಅರ್ಜಿ ನೀಡಿದ್ದು ಇಲ್ಲಿವರೆಗೂ ನಮಗೆ ಉತಾರಿ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮುಖಾಮುಖೀಯಾಗಿ ದೂರು ಹೇಳಿದ ಹಿನ್ನೆಲೆ ಅಧಿಕಾರಿಗಳ ಮೇಲೆ ಗರಂ ಆದ ಡಿಸಿ, ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ ಅವರಿಗೆ ಉತಾರಿ ವಿಳಂಬದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಸ್ವತಃ ತಾವೇ ಕುಂದು ಕೊರತೆ ವಿಭಾಗಕ್ಕೆ ತೆರಳಿ ಕಂಪ್ಯೂಟರ್‌ನಲ್ಲಿ ದಾಖಲಾತಿ ದೂರನ್ನು
ತೆಗೆದು ನೋಡಿದರು.

ರಾಮೋಡಗಿ ಅವರ ಅರ್ಜಿ ವಿಲೇವಾಗಿ ಆಗದಿರುವುದು ಕಂಡುಬಂದ ಹಿನ್ನೆಲೆ ಪುರಸಭೆಯಲ್ಲಿರುವ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಐಟಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೂಡಲೇ ಇವರನ್ನು ತೆಗೆದು ಹಾಕಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು. ಪುರಸಭೆ ಕಚೇರಿ ಕಾರ್ಯ ನಿರ್ವಹಣೆ ಬಗ್ಗೆ ಅತೃಪ್ತಿ ಹೊರಹಾಕಿದ ಅವರು ಸುಧಾರಿಸಿಕೊಳ್ಳುವಂತೆ ಮುಖ್ಯಾಧಿಕಾರಿ ಮತ್ತು ಇತರೆ ಕಚೇರಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಅಭ್ಯುದಯ ಕಾಲೇಜಿಗೆ ಭೇಟಿ: ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಕಾಲೇಜಿನಲ್ಲಿ ಅ. 28ರಿಂದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್‌ ಪಂದ್ಯಾವಳಿ ನಡೆಯಲಿದ್ದು ಪಂದ್ಯಾವಳಿ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ, ಹಾಲಿ ಸಚಿವರು, ಗಣ್ಯರು, ರಾಜ್ಯಮಟ್ಟದ
ಅಧಿಕಾರಿಗಳು ಆಗಮಿಸುವ ಹಿನ್ನೆಲೆ ವ್ಯವಸ್ಥೆ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು.

Advertisement

ರಾಜ್ಯವ್ಯಾಪಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕ್ರೀಡಾಪಟುಗಳಾಗಿ ಬರುತ್ತಿರುವುದರಿಂದ ಯಾವುದೇ ಲೋಪ ಆಗದಂತೆ ನೋಡಿಕೊಳ್ಳಲು, ಸುವ್ಯವಸ್ಥೆಗೆ ಹೆಚ್ಚು ಗಮನ ಹರಿಸಲು ನಿರ್ದೇಶನ ನೀಡಿದರು.

ಈ ವೇಳೆ ಹಾಜರಿದ್ದ ವಿಜಯಪುರದ ಪಪೂ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಬಿ. ಅಂಕದ, ಇಲಾಖೆ ಕಚೇರಿ ಮುಖ್ಯಅಧೀಕ್ಷಕ ಪ್ರಕಾಶ ಗೋಂಗಡಿ ಪಂದ್ಯಾವಳಿ ತಯಾರಿ ವಿವರಗಳನ್ನು ಡಿಸಿಗೆ ನೀಡಿದರು. ಪುರುಷ, ಮಹಿಳಾ ಕ್ರೀಡಾಪಟುಗಳ ವಸತಿಗೆ ಮಾಡಿರುವ ಪ್ರತ್ಯೇಕ ವ್ಯವಸ್ಥೆ ಬಗ್ಗೆ ತಿಳಿಸಿದರು. ಎಲ್ಲವನ್ನೂ ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ ಡಿಸಿ ಪಂದ್ಯ ನಡೆಯುತ್ತಿರುವಾಗ ಕ್ರೀಡಾಪಟುಗಳಿಗೆ ತೊಂದರೆ ಆಗದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಭದ್ರತೆಗೆ ಹೆಚ್ಚು ಒತ್ತು ನೀಡಲು ಸಲಹೆ ನೀಡಿದರು.

ಅಭ್ಯುದಯ ಕಾಲೇಜಿನ ಆಡಳಿತಾಧಿಕಾರಿ ಎಸ್‌.ಎಚ್‌. ಹಾಲ್ಯಾಳ, ಸಂಘಟಕರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪಟ್ಟಣದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪುರಸಭೆ ಸದಸ್ಯರು ಇದ್ದರು.
 
ಹಳೆ ಕೋರ್ಟ್‌ ಪರಿಶೀಲನೆ: ಪಟ್ಟಣದ ಮುಖ್ಯ ಬಜಾರನಲ್ಲಿರುವ ಹಳೆ ಕೋರ್ಟ್‌ ಕಟ್ಟಡ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದ ಡಿಸಿ ಅಲ್ಲಿ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಲು ಸಾಧ್ಯವೇ ಎನ್ನುವ ಮಾಹಿತಿಯನ್ನು ಜೊತೆಗಿದ್ದ ತಹಶೀಲ್ದಾರ್‌ ಎಂ.ಎ.ಎಸ್‌. ಬಾಗವಾನ ಅವರಿಂದ ಪಡೆದುಕೊಂಡರು. ಕೋರ್ಟ್‌ಗೆ ಸಂಬಂ ಧಿಸಿದ ಎಲ್ಲ ಚಟುವಟಿಕೆಗಳು ಹುಡ್ಕೊ ಬಳಿ ಇರುವ ಹೊಸ ಕೋರ್ಟ್‌ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಆದ್ದರಿಂದ ಕೋರ್ಟ್‌ ಹಳೆ
ಕಟ್ಟಡದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಕಚೇರಿಗಳನ್ನು ನಡೆಸಬಹುದು ಎಂಬ ಮಾಹಿತಿ ಪಡದುಕೊಂಡರು.

ವಿವಾದಿತ ಜಾಗ ಪರಿಶೀಲನೆ: ಸದ್ಯ ಕೋರ್ಟ್‌ನಲ್ಲಿ ವ್ಯಾಜ್ಯ ಇರುವ ಹಳೆ ಸರ್ಕಾರಿ ಆಸ್ಪತ್ರೆ ಪಕ್ಕದ ವಿವಾದಿತ ಜಾಗವನ್ನು ಡಿಸಿ ಪರಿಶೀಲಿಸಿದರು. ಈ ಜಾಗದಲ್ಲಿ ಸರ್ಕಾರಿ ಕಚೇರಿ ಕಟ್ಟಡ, ಸರ್ಕಾರಿ ಹಾಸ್ಟೇಲುಗಳನ್ನು ಕಟ್ಟಲಾಗಿದೆ. ಇದಕ್ಕೆ ತಮಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಜಮೀನು
ಮಾಲಿಕರು ಕೋರ್ಟ ಮೊರೆ ಹೋಗಿದ್ದಾರೆ. ಸದ್ಯ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಹೀಗಾಗಿ ವಸ್ತುಸ್ಥಿತಿ ಅವಲೋಕನ ನಡೆಸಿದ ಡಿಸಿ ತಮ್ಮ ಜೊತೆಗಿದ್ದ ತಹಶೀಲ್ದಾರ್‌ ಅವರಿಂದ ಈ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಆ ಜಾಗವನ್ನೆಲ್ಲ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next