ಮಲ್ಪೆ: ಎರಡು ಮೂರು ದಿನಗಳಿಂದ ಮಳೆ ಕೊಂಚ ಬಿಡುವು ಕೊಟ್ಟಿದ್ದು, ರವಿವಾರ ಶುಭ್ರ ವಾತಾವರಣ ಮತ್ತು ವಾರಾಂತ್ಯವಾಗಿದ್ದ ಹಿನ್ನೆಲೆಯಲ್ಲಿ ಮಲ್ಪೆ ಬೀಚ್ ಮತ್ತು ಸೀವಾಕ್ನಲ್ಲಿ ಜನಸಂದಣಿ ಕಂಡು ಬಂದಿದೆ.
ಎರಡು ದಿನಗಳಿಂದ ಕಡಲತೀರಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಬೆಳಗ್ಗೆ ದೂರದ ಪ್ರವಾಸಿಗರು ಹಾಗೂ ಮಧ್ಯಾಹ್ನದ ಬಳಿಕ ಸ್ಥಳೀಯರು ಕುಟುಂಬ ಸಮೇತ ಬಂದು ಕಡಲತಡಿಯಲ್ಲಿ ಸಮಯ ಕಳೆದಿದ್ದಾರೆ. ಇಲ್ಲಿನ ಸೀ ವಾಕ್ನಿಂದ ಮುಖ್ಯ ಬೀಚ್ನ ವರೆಗೂ ಜನ ಸಂದಣಿ ಕಂಡುಬಂದಿದೆ.
ಬೀಚ್ನಲ್ಲಿ ಯಾರೂ ನೀರಿಗೆ ಇಳಿಯದಂತೆ ಎಚ್ಚರ ವಹಿಸಲಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಡಲ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಪ್ರತೀವರ್ಷ ಮಳೆಗಾಲದಲ್ಲಿ ಬೀಚ್ ಉದ್ದಕ್ಕೂ ರಿಫ್ಲೆಕ್ಟೆಡ್ ಪಟ್ಟಿ ಮತ್ತು ಫಿಶ್ನೆಟ್ ತಡೆಬೇಲಿ ನಿರ್ಮಿಸಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಆದರೂ ಪ್ರವಾಸಿಗರು ಕದ್ದು ಮುಚ್ಚಿ ನೀರಿಗಿಳಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬಂದಿಯನ್ನು ನೇಮಿಸಲಾಗಿದೆ. ಹಾಗಾಗಿ ಬೀಚಿಗೆ ಬಂದ ಪ್ರವಾಸಿಗರು ದೂರದಲ್ಲಿ ನೋಡಿ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಬೀಚ್ನಲ್ಲಿ ತಡೆಬೇಲಿ ಅಗಸ್ಟ್ ಅಂತ್ಯದವರೆಗೂ ಇರಲಿದ್ದು, ಸೆಪ್ಟಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ನೀರಿನ ಒತ್ತಡವನ್ನು ನೋಡಿಕೊಂಡು ತೆಗೆಯಲಾಗುವುದು ಎಂದು ತಿಳಿದು ಬಂದಿದೆ.
ಖುಷಿ ಕೊಟ್ಟ ಕೈರಂಪಣಿ ಮೀನುಗಾರಿಕೆ
ಕೊಳ ಭಾಗದ ಕಡಲತೀರದಲ್ಲಿ ಸಾಂಪ್ರ ದಾಯಿಕ ಕೈರಂಪಣಿ ಮೀನುಗಾರಿಕೆ ನಿರತರಾದ ಮೀನುಗಾರರು ಮೀನಿಗೆ ಬಲೆ ಬೀಸುತ್ತಿದ್ದು, ಇದು ನೋಡುಗರಿಗೆ ಹೊಸ ಖುಷಿ ನೀಡಿದೆ.