ಧಾರವಾಡ: ಜಿಲ್ಲೆಯ ಶೈಕ್ಷಣಿಕ ಪ್ರಗತಿ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಶಿಕ್ಷಕರನ್ನು ಗೌರವಿಸುವುದು ಸಮಾಜದ ಪ್ರಮುಖ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಡಾ|ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ವತಿಯಿಂದ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಯಮುನಾಬಾಯಿ ಕಲ್ಯಾಣ ಶಿಕ್ಷಣ ಪರಿಶ್ರಮ ಗೌರವ ದತ್ತಿ ಪುರಸ್ಕಾರ’ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಕಲಿಕಾ ಸಾಮರ್ಥ್ಯ ಹಾಗೂ ಕೊರತೆಯನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಶಿಕ್ಷಕರು ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸ ನಿರ್ವಹಿಸುತ್ತಾರೆ. ಈ ವೃತ್ತಿಯಿಂದಲೇ ಸರ್ವಪಲ್ಲಿ ರಾಧಾಕೃಷ್ಣನ್ ಅವರು ದೇಶದ ಉನ್ನತ ಹುದ್ದೆಗೇರಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ.
ಶಿಕ್ಷಕ ವೃತ್ತಿಯಲ್ಲಿ ಸಿಗುವಂತಹ ಗೌರವ ಮತ್ಯಾವ ವೃತ್ತಿಯಲ್ಲೂ ಸಿಗುವುದಿಲ್ಲ. ಇದನ್ನರಿತು ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದರು. ಜಿಲ್ಲಾ ಪಂಚಾಯತ್ ಸಿಇಒ ಸ್ನೇಹಲ್ ರಾಯಮಾನೆ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಸಾಧನೆ ಶಿಕ್ಷಕರಿಂದ ಮಾತ್ರ ಸಾಧ್ಯ. ಹೀಗಾಗಿ ಸಮಾಜದಲ್ಲಿನ ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುವಂತಹ ಕಾರ್ಯ ಸದಾ ನಡೆಯಬೇಕು.
ಶಿಕ್ಷಕರು ನಿರಂತರ ಅಧ್ಯಯನ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯದ ಶೈಕ್ಷಣಿಕ ಸಾಧನೆಯಲ್ಲಿ ಧಾರವಾಡ ಜಿಲ್ಲೆ ಹಿಂದೆ 10ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ 8ನೇ ಸ್ಥಾನಕ್ಕೇರಿದೆ. ಇದಕ್ಕೆಲ್ಲ ಶಿಕ್ಷಕರ ಪರಿಶ್ರಮವೇ ಕಾರಣವಾಗಿದೆ. ಆದ್ದರಿಂದ ಈ ಕಾರ್ಯಕ್ಕೆ ಶ್ರಮಿಸಿದ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಮಕ್ಕಳ ಅಭಿವೃದ್ಧಿಗೆ ಕಾರಣರಾದ ಶಿಕ್ಷಕರಿಗೆ ಶಿಕ್ಷಣ ಪರಿಶ್ರಮ ಗೌರವ ನೀಡಿ ಸನ್ಮಾನಿಸಲಾಯಿತು. ಸಾಹಿತಿ ಡಾ|ಸಿದ್ಧಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್. ಜಯಕುಮಾರ, ಎಂ.ಡಿ. ಬಳ್ಳಾರಿ, ಬಸವರಾಜ ಗುರಿಕಾರ, ಶಿವಶಂಕರ ಹಿರೇಮಠ, ಎಸ್.ಬಿ.ಕೊಡ್ಲಿ, ಶಂಕರ ಗಂಗಣ್ಣವರ, ಎಸ್.ಎಂ. ಹುಡೇದಮನಿ ಇದ್ದರು.