ಧಾರವಾಡ: ನಟನೆಯನ್ನು ಶಾಸ್ತ್ರೀಯವಾಗಿ ಕಲಿಸುವ ರಂಗಾಯಣ, ನೀನಾಸಂ ಸೇರಿದಂತೆ ಇನ್ನಿತರ ಎಲ್ಲ ಕೇಂದ್ರಗಳ ಬಗ್ಗೆ ಅಪಾರ ಗೌರವವಿದೆ ಎಂದು ನಟ ಮಂಡ್ಯ ರಮೇಶ ಹೇಳಿದರು. ನಗರದ ರಂಗಾಯಣದಲ್ಲಿ ಹಮ್ಮಿಕೊಂಡ ರಂಗಧ್ವನಿ-17ರ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣದಲ್ಲಿ ಕಂಪನಿ ನಾಟಕ ನಟನೆ ವಿಷಯ ಕುರಿತಂತೆ ಮಾತನಾಡಿದರು.
ಶಾಸ್ತ್ರೀಯ ಅಧ್ಯಯನ ಇರುವ ಶಕ್ತ ನಟರನ್ನು ರಂಗಭೂಮಿಗೆ ನೀಡುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದರು. ನಂತರ ಕಂಪನಿ ನಾಟಕದ ವಿವಿಧ ಮಜಲನ್ನು ವಿಶ್ಲೇಷಿಸಿದ ಅವರು, ಕಂಪನಿ ನಾಟಕದ ನಟನಾಗಲು ತಾಣ ಬೇಕು. ಹೀಗಾಗಿ ಇಂದಿನ ದಿನಗಳಲ್ಲಿ ಕಂಪನಿ ನಾಟಕಗಳ ಪ್ರದರ್ಶನ ಹೆಚ್ಚಾಗಿ ನಡೆಯಬೇಕು.
ಇದರಿಂದ ನಟರು ರಂಗ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದರು. ನಾಟಕ, ಪ್ರದರ್ಶನ ಮತ್ತು ರಾಜಕಾರಣ ವಿಷಯ ಕುರಿತಂತೆ ಅಶುತೋಷ ಪೋತದಾರ ಮಾತನಾಡಿ, ನಾಟಕ ರಚನೆಯಾದ ನಂತರದಲ್ಲಿ ಅದರ ಪಠ್ಯವನ್ನು ಸೆನ್ಸಾರ್ ಮಂಡಳಿಗೆ ಒಪ್ಪಿಸಿ ಅನುಮತಿ ಪಡೆಯುವಂತೆ ಮಹಾರಾಷ್ಟ್ರದಲ್ಲಿರುವ ಅಸಂಗತ ಕ್ರಿಯೆ ಕರ್ನಾಟಕದಲ್ಲಿ ಇಲ್ಲದಿರುವುದು ಒಳ್ಳೆಯ ಸಂಗತಿ ಎಂದರು.
ಇದೇ ವೇಳೆ ಶಿವರಾಮ ಕಾರಂತರ ಜೊತೆಗೆ ಕಳೆದ ದಿನಗಳನ್ನು ಸ್ಮರಿಸಿದರಲ್ಲದೇ ಭಾಷಾವಾರು ನಾಟಕಗಳ ವರ್ಗೀಕರಣ ಬಗ್ಗೆ ಅಸಮ್ಮತಿ ಸೂಚಿಸಿದರು. ಅಂದಿನ ಕಾಲದಲ್ಲಿ ನಾಟಕದಲ್ಲೂ ಜಾತಿ ಪ್ರಭಾವವಿತ್ತು. ಪಾತ್ರಗಳನ್ನು ಹಂಚುವ ಸಮಯದಲ್ಲಿ ಮುಖ್ಯ ಪಾತ್ರಗಳನ್ನು ಉನ್ನತ ಜಾತಿಯವರಿಗೆ ನೀಡಿದರೆ, ಇತರೆ ಪಾತ್ರಗಳನ್ನು ಕೆಳವರ್ಗದ ಜನರು ನಿರ್ವಹಿಸುತ್ತಿದ್ದರು ಎಂದು ವಿಷಾದ ವ್ಯಕ್ತಪಡಿಸಿದರು.
ನಂತರ ನಡೆದ ವಿವಿಧ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳಲ್ಲಿ ದೋಹರಿ ಜಿಂದಗಿ ನಾಟಕವನ್ನು ಮುಂಬೈಯದವರಾದ ನೇಹಾಸಿಂಗ್ ಮತ್ತು ತಂಡದವರು ಪ್ರಸ್ತುತಪಡಿಸಿದರೆ, ಮನೀಶ ಮಿತ್ರಾ ಹಾಗೂ ತಂಡದವರು ರಂಗದ ಮೇಲೆ ದೇಹದ ನಾದಮಯತೆಯ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.