Advertisement
9 ರಾಜ್ಯಗಳ 12 ರೈತರು: ಒಟ್ಟು 9 ರಾಜ್ಯಗಳ 12 ಮಂದಿ ಕೃಷಿಕರನ್ನು ಪದ್ಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸಾಂಪ್ರದಾಯಿಕ ಕೃಷಿಕರು, ಪ್ರಗತಿಪರ ರೈತರು, ಹೈನುಗಾರಿಕೆ ವಲಯವನ್ನೂ ಪರಿಗಣಿಸಿ, ವಿಶೇಷ ಸಾಧನೆ ಮಾಡಿದವರನ್ನು ಗೌರವಿಸಲಾಗಿದೆ. ಬಡ ಜನರ ಸೇವೆಗೆ ತಮ್ಮ ವೃತ್ತಿಯನ್ನು ಮುಡುಪಾಗಿಟ್ಟಿರುವ 11 ರಾಜ್ಯಗಳ 14 ವೈದ್ಯರ ಸೇವೆಯನ್ನೂ ಪರಿಗಣಿಸಲಾಗಿದೆ. ಇದಲ್ಲದೆ, ಸಮಾಜವಾದಿ ನಾಯಕ ಹುಕುಂದೇವ್ ಯಾದವ್, ಬುಡಕಟ್ಟು ನಾಯಕ ಕರಿಯಾ ಮುಂಡಾ, ಸಿಖ್ ನಾಯಕ ಸುಖ್‌ದೇವ್ ಸಿಂಗ್, ಮಹಾದಲಿತ ಮಹಿಳಾ ನಾಯಕಿ ಭಾಗೀರಥಿ ದೇವಿ, 1984ರ ಸಿಖ್ ವಿರೋಧಿ ದಂಗೆಯ ವಿರುದ್ಧ ಹೋರಾಡುತ್ತಿರುವ ಸಿಖ್ ವಕೀಲ ಹರ್ವಿಂದರ್ ಸಿಂಗ್ ಫೂಲ್ಕಾ ಕೂಡ ಪದ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಹಲವು ಸುತ್ತಿನ ಪರಿಶೀಲನೆ, ತಜ್ಞರ ಸಲಹೆಗಳನ್ನು ಆಧರಿಸಿ ಈ ಆಯ್ಕೆಗಳನ್ನು ಮಾಡಲಾಗಿದೆ ಎನ್ನುತ್ತಾರೆ ಗೃಹ ಇಲಾಖೆ ಅಧಿಕಾರಿಗಳು.
ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಸಹೋದರಿ, ಖ್ಯಾತ ಲೇಖಕಿ ಗೀತಾ ಮೆಹ್ತಾ ಅವರು ತಮಗೆ ಸಂದಿರುವ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ನನ್ನನ್ನು ಪ್ರಶಸ್ತಿಗೆ ಪರಿಗಣಿಸಿದ್ದಕ್ಕೆ ಭಾರತ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರೆ ತಪ್ಪು ಅರ್ಥ ಉಂಟಾ ಗುತ್ತದೆ. ಇದರಿಂದ ಸರಕಾರಕ್ಕೂ, ನನಗೂ ಮುಜುಗರ ಉಂಟಾಗುತ್ತದೆ. ಹೀಗಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನನಗೆ ನೀಡಿರುವ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ ಎಂದಿದ್ದಾರೆ ಮೆಹ್ತಾ.