Advertisement

‘ದೇಶ ಕಾಯುವ ಯೋಧರಿಗೆ ನಮ್ಮ ಹಾರೈಕೆಯೆ ಶ್ರೀರಕ್ಷೆ’: ಸದಾನಂದ ಪ್ರಭು

12:08 PM Feb 21, 2019 | Team Udayavani |

ಉಡುಪಿ: ಕಳೆದ ಗುರುವಾರ ಕಣಿವೆ ರಾಜ್ಯದ ಪುಲ್ವಾಮದಲ್ಲಿ ಆತ್ಮಾಹುತಿ ಉಗ್ರ ದಾಳಿಗೆ ಹುತಾತ್ಮರಾದ ಯೋಧರಿಗೆ ದೇಶಕ್ಕೆ ದೇಶವೇ ಕಂಬನಿ ಮಿಡಿಯುತ್ತಿದೆ. ಮತ್ತು ದೇಶ ಸೇವೆಯ ಕರ್ತವ್ಯದಲ್ಲಿರುವಾಗಲೇ ವೀರಮರಣವನ್ನಪ್ಪಿದ ನಮ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ದೇಶದ ನಾಗರಿಕರು ‘ಯೋಧ ನಮನ’ ಕಾರ್ಯಕ್ರಮಗಳನ್ನು ನಡೆಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ.

Advertisement


ಇತ್ತ ಉಡುಪಿ ಜಿಲ್ಲೆಯ ಪೆರ್ಣಂಕಿಲ – ಕುದಿ ಗ್ರಾಮದ ಜನತಾನಗರದಲ್ಲಿ ನಾಗರಿಕರು ಬುಧವಾರದಂದು ಹುತಾತ್ಮ ಯೋಧರಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಬಾವಚಿತ್ರಗಳ ಎದುರಿನಲ್ಲಿ ಹಣತೆಗಳನ್ನು ಭಾರತದ ಭೂಪಟ ಮಾದರಿಯಲ್ಲಿ ಇರಿಸಿ ಮಧ್ಯದಲ್ಲಿ ಕಾಲುದೀಪವನ್ನು ಇಟ್ಟು ಆರಿ ಹೋದ ಮಹಾನ್ ಚೇತನಗಳಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಸದಾನಂದ ಪ್ರಭು ಅವರು, ‘ನಾವಿಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿರುವುದಕ್ಕೆ ಅಲ್ಲಿ ಗಡಿಯಲ್ಲಿ ನಮ್ಮ ವೀರಯೋಧರು ತಮ್ಮ ಭವಿಷ್ಯವನ್ನು ಪಣಕ್ಕಿಟ್ಟು ಪ್ರಾಣವನ್ನು ಒತ್ತೆಯಿಟ್ಟು ದೇಶ ಕಾಯುತ್ತಿರುವುದೇ ಕಾರಣ. ಅಂತಹ ಯೋಧರು ತಮ್ಮ ಕುಟುಂಬ ಪರಿವಾರವನ್ನು ತೊರೆದು ಅಲ್ಲೆಲ್ಲೋ ದೂರದ ಊರಿನಲ್ಲಿ ಪ್ರಾಣತ್ಯಾಗ ಮಾಡುತ್ತಾರೆಂದಾದರೆ ಅವರನ್ನು ಒಂದು ಕ್ಷಣ ನೆನಪಿಸಿಕೊಳ್ಳುವುದು ಈ ದೇಶದ ನಾಗರಿಕರಾಗಿ ನಮ್ಮ ಕರ್ತವ್ಯ’ ಎಂದು ಅವರು ಹೇಳಿದರು.

ಅರುಣ್ ಕುಲಾಲ್ ಅವರು ಒಟ್ಟು ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಿದ್ದರು. ಗೃಹಿಣಿಯರು, ಮಕ್ಕಳು, ವೃದ್ಧರು, ಯುವಕರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ವೀರಯೋಧರಿಗೆ ನಮನವನ್ನು ಸಲ್ಲಿಸಿದರು.


Advertisement

Udayavani is now on Telegram. Click here to join our channel and stay updated with the latest news.

Next