ಬಾಗಲಕೋಟೆ: ಜನಪ್ರಭುತ್ವ ವ್ಯವಸ್ಥೆಯಲ್ಲಿ ನಿಮಗಿರುವ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾಭಿಮಾನಿಗಳಾಗಿ ಬದುಕುವಂತೆ ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ನವನಗರದ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಫಾಯಿ ಕರ್ಮಚಾರಿಗಳು, ಮ್ಯಾನುವಲ್ ಸ್ಕ್ಯಾವೆಂಜರಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಂಬಂಧ ಇರುವ ಕಾನೂನು ಮತ್ತು ವಿವಿಧ ಇಲಾಖೆಗಳು ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಹಮ್ಮಿಕೊಂಡ ಜಿಲ್ಲಾಮಟ್ಟದ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗದೆ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಅದಕ್ಕಾಗಿ ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಸಿ, ಶಿಕ್ಷಣದಿಂದ ಯಾವ ಮಗುವು ವಂಚಿತರಾಗದಂತೆ ನೋಡಿಕೊಳ್ಳಬೇಕು. ಸರ್ಕಾರವು ಪೌರಕಾರ್ಮಿರ ಮಕ್ಕಳಿಗಾಗಿ ಸಾಕಷ್ಟು ಅನುದಾನ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳುವ ಅರಿವು ಪೌರ ಕಾರ್ಮಿಕರಲ್ಲಿ ಬರಬೇಕು ಎಂದು ಹೇಳಿದರು.
ಜಿಲ್ಲೆಯನ್ನು ಸ್ವಚ್ಛಗೊಳಿಸುವ ಮೂಲಕ ಸುಂದರ ಸಮಾಜ ನಿರ್ಮಾಣ ಮಾಡುತ್ತಿರುವ ಪೌರಕಾರ್ಮಿಕರು, ತಮ್ಮ ಜೀವನವನ್ನು ಸುಂದರವಾಗಿಟ್ಟುಕೊಳ್ಳಬೇಕು. ತಾವು ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಕಡ್ಡಾಯ ಶಿಕ್ಷಣ ನೀಡುವುದರ ಜೊತೆಗೆ ಪಠ್ಯ-ಪುಸ್ತಕ, ಬಟ್ಟೆ ಹಾಗೂ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬಂದು ಸ್ವಾಭಿಮಾನಿಗಳಾಗಿ ಬದುಕಲು ಹೇಳಿದರು.
ಮಲ ಹೊರುವ ಪದ್ಧತಿಯನ್ನು ಸರ್ಕಾರ ಸಂಪೂರ್ಣ ನಿಷೇಧಿಸಿದ್ದು, ಇದನ್ನು ಉಲ್ಲಂಘಿಸಿ ಮಲ ಹೊರುವ ಹಾಗೂ ಹೊರಲು ಹೇಳಿದವರಿಗೆ ಶಿಕ್ಷೆ ನೀಡಲಾಗುತ್ತದೆ. ಆದ್ದರಿಂದ ಇಂತಹ ಪದ್ಧತಿ ಕಂಡುಬಂದಲ್ಲಿ ಮಾಹಿತಿ ನೀಡಿ. ಮಲ ಹೊರುವ ಅನಿಷ್ಠ ಪದ್ಧತಿಯನ್ನು ಸಂಪೂರ್ಣ ತೊಡೆದು ಹಾಕಲು ಎಲ್ಲರೂ ಸಹಕರಿಸಬೇಕು. ಪೌರಕಾರ್ಮಿಕರು ಕುಡಿತ, ದುಶ್ಚಟಗಳಿಂದ ದೂರವಿರಬೇಕು ಎಂದರು.
ವಕೀಲ ಶ್ರೀಧರ ದಾಸ ಸಫಾಯಿ ಕರ್ಮಚಾರಿ, ಮ್ಯಾನುವಲ್ ಸ್ಕ್ಯಾವೆಂಜರಗಳಿಗೆ ಇರುವ ಕಾನೂನುಗಳ ಬಗ್ಗೆ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಆರ್. ಪವಾರ ಆರೋಗ್ಯದ ಬಗ್ಗೆ ಹಾಗೂ ಕಾರ್ಮಿಕ ನಿರೀಕ್ಷಕ ಅಶೋಕ ಒಡೆಯರ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಜಗದೀಶ ಹೆಬ್ಬಳ್ಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಮುಂತಾದವರು ಉಪಸ್ಥಿತರಿದ್ದರು.