Advertisement

ಮಂಗಳಮುಖಿಯರ ಹಕ್ಕು ಗೌರವಿಸಿ: ಮಂಜಮ್ಮ

04:28 PM Apr 06, 2022 | Niyatha Bhat |

ಶಿವಮೊಗ್ಗ: ಸ್ವಾತಂತ್ರ್ಯ ಭಾರತದಲ್ಲಿ ಎಲ್ಲರಿಗೂ ತಮ್ಮ ಆಯ್ಕೆಯಂತೆ ಬದುಕುವ ಹಕ್ಕಿದೆ. ವರ್ಣ, ವರ್ಗ, ಲಿಂಗಭೇದಗಳನ್ನು ಮಾಡದೇ ಎಲ್ಲರನ್ನು ಸಮಾನತೆಯಿಂದ ಕಾಣುವುದರ ಜೊತೆಗೆ ಮಂಗಳಮುಖೀಯರ ಮತ್ತು ಅಲಕ್ಷಿತ ಸಮುದಾಯಗಳ ಹಕ್ಕುಗಳನ್ನು ಗೌರವಿಸಿ, ಅವಕಾಶ ನೀಡಿ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಬಿ. ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿಶ್ವವಿದ್ಯಾಲಯದ ಪ್ರೊ| ಎಸ್‌.ಪಿ. ಹೀರೆಮಠ ಸಭಾಂಗಣದಲ್ಲಿ ಡಾ| ಬಾಬು ಜಗಜೀವನರಾಮ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಡಾ| ಬಾಬು ಜಗಜೀವನರಾಮ್‌ ಅವರ 115ನೇ ಜನ್ಮದಿನಾಚರಣೆ ಹಾಗೂ “ಅಲಕ್ಷಿತ ಸಮುದಾಯಗಳು ಮತ್ತು ಸಾಮಾಜಿಕ ನ್ಯಾಯ’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆಯನ್ನು ತರುವುದು ಡಾ| ಬಿ.ಆರ್‌. ಅಂಬೇಡ್ಕರ್‌ ಮತ್ತು ಡಾ| ಬಾಬು ಜಗಜೀವನ್‌ ರಾಮ್‌ ಅವರ ಚಿಂತನೆಗಳಾಗಿದ್ದವು. ಅದರಂತೆ ನಡೆಯುವುದೇ ಸಂವಿಧಾನ ಮತ್ತು ಅವರುಗಳಿಗೆ ನಾವು ನೀಡಬಹುದಾದ ಗೌರವ. ದಲಿತರು, ದಮನಿತರು, ಅಂಚಿನಲ್ಲಿರುವ ಸಮುದಾಯಗಳಾದ ನಮಗೆ ಅನುಕಂಪ ಬೇಡ. ಶಿಕ್ಷಣ ಮತ್ತು ದುಡಿಯುವ ಅವಕಾಶಗಳನ್ನು ನೀಡಿ. ಉತ್ತಮವಾದ ಶಿಕ್ಷಣಕ್ಕೆ ಸಮಾಜದಲ್ಲಿ ಸಮಾನತೆ ತರುವ ಶಕ್ತಿಯಿದೆ. ಅಸಾಧ್ಯ ಎಂದು ಯಾರೂ ಹಿಂದುಳಿಯಬಾರದು; ಬದುಕುವ ಮಾರ್ಗ ಸರಿಯಿದ್ದರೆ‌ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ತಿಳಿಸಿದರು.

ವಿಚಾರ ಸಂಕಿರಣದ ದಿಕ್ಸೂಚಿ ನುಡಿಗಳನ್ನಾಡಿದ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಕೆ.ಎಂ. ಮೇತ್ರಿ, ಸಾಮಾಜಿಕ ನ್ಯಾಯದ ಮೂಲಕ ಬುಡಕಟ್ಟು ಸಮುದಾಯಗಳೂ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಜನರಿಗೆ  ದೀರ್ಘ‌ಕಾಲಿಕ ಯೋಜನೆಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ನಿರ್ಲಕ್ಷಿತರಿಗೆ‌ ಶಿಕ್ಷಣ, ಉದ್ಯೋಗವನ್ನು ನೀಡಬೇಕು. ನಿರ್ಲಕ್ಷಿತರ ಮೇಲೆ ಅಧ್ಯಯನ ಮಾಡಿ ಸಮಾಜದ ಮುಂದೆ ಅವರ ಸಮಸ್ಯೆಗಳನ್ನು ಪ್ರಸ್ತುತಪಡಿಸುವಂತಹ ಕಾರ್ಯಕ್ರಮಗಳು ಜರುಗಬೇಕು. ಅಲಕ್ಷಿತ ಸಮಾಜದ ಜನರ ವಿಶಿಷ್ಟ ಜೀವನ ಶೈಲಿಗಳು, ಸಂಸ್ಕೃತಿಗಳನ್ನು ಅಧ್ಯಯನಿಸಿ ಅರಿಯಬೇಕು, ಗೌರವಿಸಬೇಕು ಆ ಮೂಲಕ ಸರ್ಕಾರದ ನೀತಿ ನಿರೂಪಣೆಗಳಲ್ಲಿ ಅವುಗಳು ಬಿಂಬಿತವಾಗುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಜನಪದ ಗಾಯಕ ಜೋಗಿಲ ಸಿದ್ಧರಾಜು ಅವರು ಜನಪದ ಗೀತೆಯೊಂದನ್ನು ಹಾಡಿ ಸಭಿಕರನ್ನು ರಂಜಿಸಿದರು. ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ| ನವೀನ್‌ ಕಮಾರ್‌ ಎಸ್‌. ಕೆ., ಈ ದಿನ ಡಾಟ್‌ ಕಾಂ ವೆಬ್‌ ತಾಣದ ಸುದ್ದಿ ಸಂಪಾದಕ ಬಿ ವಿ ಶ್ರೀನಾಥ್‌ ಹಾಗೂ ಡಾ| ಬಾಬು ಜಗಜೀವನ್‌ ರಾಮ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕ ಡಾ| ಸತ್ಯಪ್ರಕಾಶ್‌ ಎಂ.ಆರ್‌. ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next