ನವದೆಹಲಿ: ಮತದಾರರು ನಮ್ಮ ಪರವಾಗಿ ನೀಡಿರುವ ಭರ್ಜರಿ ಜನಾದೇಶವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್.ಡಿ.ಎ. ಮಿತ್ರಪಕ್ಷಗಳ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇಂದು ನಡೆದ ಬಿಜೆಪಿ ಮಿತ್ರಪಕ್ಷಗಳ ಸಭೆಯಲ್ಲಿ ಶಿವಸೇನೆ ಭಾಗವಹಿಸದೇ ಇದ್ದುದಕ್ಕೆ ಸಂಬಂಧಿಸಿದಂತೆ ಮೋದಿ ಅವರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.
ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಇರಬೇಕು. ಜನರು ನಮಗೆ ಭರ್ಜರಿ ಜನಾದೇಶವನ್ನು ನೀಡಿದ್ದಾರೆ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ. ನಮ್ಮ ತತ್ವ ಸಿದ್ಧಾಂತಗಳು ಭಿನ್ನವಾಗಿದ್ದರೂ ನಾವೆಲ್ಲರೂ ಸಮಾನ ಮನಸ್ಕರಾಗಿರುವ ಕಾರಣ ಈ ಕೂಟದಲ್ಲಿದ್ದೇವೆ, ಹಾಗಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಬಿರುಕನ್ನು ಮೂಡಿಸಬಾರದು ಎಂದು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಲೋಕ ಜನಶಕ್ತಿ ಪಕ್ಷದ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ ಚಿರಾಗ್ ಪಾಸ್ವಾನ್ ಅವರು ಶಿವಸೇನೆ ಎನ್.ಡಿ.ಎ.ಯಿಂದ ಹೊರಹೋಗಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು ಮಾತ್ರವಲ್ಲದೇ ಎನ್.ಡಿ.ಎ. ಮಿತ್ರಪಕ್ಷಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದಕ್ಕೆ ಚಿರಾಗ್ ಅವರು ಖೇದ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್, ‘ನಾವು ಶಿವಸೇನೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಮತ್ತು ಇವತ್ತಿನ ಎನ್.ಡಿ.ಎ. ಸಭೆಯನ್ನು ಶಿವಸೇನೆ ತಪ್ಪಿಸಿಕೊಂಡಿತ್ತು’ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷಗಳು ಎನ್.ಡಿ.ಎ. ಮಿತ್ರ ಕೂಟದಿಂದ ಹೊರನಡೆದಿದ್ದವು.