ಮಂಗಳೂರು: ಮಂಗಳೂರು ಧರ್ಮ ಪ್ರಾಂತದ ನೂತನ ಬಿಷಪ್ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ತಮ್ಮ ಅಧಿಕೃತ ಧರ್ಮ ಕ್ಷೇತ್ರ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಮೊದಲ ಬಲಿ ಪೂಜೆಯನ್ನು ರವಿವಾರ ಸಮರ್ಪಿಸಿದರು. ಬಳಿಕ ಜರಗಿದ ಸಮ್ಮಾನ ಸಮಾರಂಭದಲ್ಲಿ ಸಮ್ಮಾನಕ್ಕೆ ಉತ್ತರಿಸಿದ ನೂತನ ಬಿಷಪ್, ಗೌರವ ಬರುವುದು ಹುದ್ದೆಯಿಂದಲ್ಲ; ಜನರ ಮಧ್ಯೆ ಕೆಲಸ ಮಾಡುವುದರಿಂದ ಎಂದರು.
ಕೆಥೆಡ್ರಲ್‌ನ ರೆಕ್ಟರ್ ಫಾ| ಜೆ.ಬಿ. ಕ್ರಾಸ್ತಾ, ಭಾರತದ ಪೋಪ್ ಪ್ರತಿನಿಧಿಯ ಕೌನ್ಸಿಲರ್ ಮೊ| ಕ್ಸೇವಿಯರ್ ಡಿ. ಫೆರ್ನಾಂಡಿಸ್, ಧರ್ಮ ಪ್ರಾಂತದ ನಿವೃತ್ತ ವಿಕಾರ್ ಜನರಲ್ ಮೊ| ಡೆನಿಸ್ ಮೊರಾಸ್ ಪ್ರಭು, ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ| ಡಯನೇಶಿಯಸ್ ವಾಸ್, ಧರ್ಮ ಪ್ರಾಂತದ ಪಿಆರ್‌ಒ ಫಾ| ವಿಜಯ್ ವಿಕ್ಟರ್ ಲೋಬೊ, ಕೆಥೆಡ್ರಲ್‌ನ ಗುರುಗಳಾದ ಫಾ| ರೋಕಿ ಫೆರ್ನಾಂಡಿಸ್, ಫಾ| ವಿಕ್ಟರ್ ಡಿ’ಸೋಜಾ, ಫಾ| ಫ್ಲೆàವಿಯನ್ ಲೋಬೊ, ಗ್ಲಾ éಡ್‌ಸಮ್ ಹೋಮ್ ರೆಕ್ಟರ್ ಫಾ| ಅನಿಲ್ ಫೆರ್ನಾಂಡಿಸ್ ಬಲಿಪೂಜೆಯಲ್ಲಿ ಸಹಭಾಗಿಗಳಾದರು.
ನಾನು ಜನರ ಜತೆಗೆ ನಡೆದಾಗ ಮಾತ್ರ ನನ್ನ ಪೋಷಾಕು, ದಂಡ ಮತ್ತು ಕಿರೀಟಗಳಿಗೆ ಗೌರವ ಲಭಿಸುತ್ತದೆ. ನಾನೊಬ್ಬನೇ ಹೋದರೆ ಇದು ಯಾವುದೋ ವೇಷ ಎಂದು ಜನರು ಪರಿಗಣಿಸುತ್ತಾರೆ. ಗೌರವ ವಿರುವುದು ನಾನು ಧರಿಸಿದ ಬಟ್ಟೆ, ದಂಡ ಅಥವಾ ಕಿರೀಟಕ್ಕಲ್ಲ; ಜನರ ಜತೆ ಬೆರೆತು ಜೀವಿಸಿದಾಗ ಮಾತ್ರ. ಶನಿವಾರ ಮುಖಂಡರು ಮತ್ತು ಸಹಸ್ರಾರು ಜನ ನನ್ನ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಒಗ್ಗಟ್ಟಿನ ಸಂಕೇತ. ಈ ಏಕತೆ ಇನ್ನಷ್ಟು ಹೆಚ್ಚಳವಾಗಬೇಕು ಎಂದು ಆಶಿಸಿದರು.
ಫಾ| ಜೆ.ಬಿ. ಕ್ರಾಸ್ತಾ ಅವರು ಬಿಷಪ್ ಅವರನ್ನು ಸ್ವಾಗತಿಸಿ ಅಭಿನಂದಿಸಿ, ಶಾಲು ಹೊದೆಸಿ, ತಲೆಗೆ ಪೇಟವನ್ನಿರಿಸಿ, ಹೂಗುತ್ಛ ನೀಡಿ ಸಮ್ಮಾನಿಸಿದರು. ಪಾಲನ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅವರು ಬಿಷಪರನ್ನು ಅಭಿನಂದಿಸಿದರು.
ಮೊ| ಕ್ಸೇವಿಯರ್ ಡಿ. ಫೆರ್ನಾಂಡಿಸ್ ಅವರು ನೂತನ ಬಿಷಪರಿಗೆ ಪೋಪ್ ಪ್ರತಿನಿಧಿಯ ಆಶೀರ್ವಾದಗಳನ್ನು ಸಲ್ಲಿಸಿದರು. ಮೊ| ಡೆನಿಸ್ ಮೊರಾಸ್ ಪ್ರಭು ಉಪಸ್ಥಿತರಿದ್ದರು. ಕೆಥೆಡ್ರಲ್‌ನ ಉಪಾಧ್ಯಕ್ಷ ಸಿ.ಜೆ. ಸೈಮನ್ ವಂದಿಸಿದರು. ಕಾರ್ಯದರ್ಶಿ ಎಲಿಜಬೆತ್ ರೋಚ್ ಕಾರ್ಯಕ್ರಮ ನಿರೂಪಿಸಿದರು.
ಜತೆಗೂಡಿ ಉತ್ತಮ ಸಮಾಜ ನಿರ್ಮಾಣ
ಈ ಧರ್ಮಪ್ರಾಂತದ ಶಾಶ್ವತ ಮುಖಂಡರು ಏಸು ಕ್ರಿಸ್ತರು. ನಾನು ಕೆಲವು ಸಮಯಕ್ಕೆ ಅದೃಶ್ಯ ದೇವರನ್ನು ಸಾಕಾರರನ್ನಾಗಿ ತೋರಿಸಿ ಕೊಡುವ ಜವಾಬ್ದಾರಿಯನ್ನು ಹೊಂದಿದ್ದೇನೆ. ನಾವೆಲ್ಲರೂ ಜತೆಗೂಡಿ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ನೂತನ ಬಿಷಪ್ ಕರೆ ನೀಡಿದರು.