ಗುರುಮಠಕಲ್: ಪರಸ್ಪರ ವಿಶ್ವಾಸ ಬೆಳೆದು ಭಾರತ ಮಾತೆಯ ಸಹೋದರತ್ವದ ಭಾವನೆ ಬೆಳೆಯಲು ಎಲ್ಲ ಭಾಷೆಗಳನ್ನು ಗೌರವಿಸಬೇಕು ಎಂದು ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು.
ಪಟ್ಟಣದ ಖಾಸಾಮಠ ಆವರಣದಲ್ಲಿ ಖಾಸಾಮಠ ಹಾಗೂ ಕಲಬುರ್ಗಿಯ ಹಜರತ್ ಸೂಫಿ ಸರ್‌ಮಸ್ತ್ ಇಸ್ಲಾಮಿಕ್ ಸ್ಟಡಿ ಸರ್ಕಲ್ ಆಶ್ರಯದಲ್ಲಿ ಆಯೋಜಿಸಿದ್ದ ಬಹುಭಾಷೆಯ ಕವಿಗಳ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿನಾಡು ಆಗಿರುವ ಬೆಳಗಾವಿಯಲ್ಲಿ ಕೆಲ ಕಿಡಿಗೇಡಿಗಳು ನಾಡಧ್ವಜ ಸುಟ್ಟುಹಾಕಿದ್ದು, ಕನ್ನಡಿಗರ ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಮಸಿ ಬಳಸಿ ಅಂಧ ಭಾಷಾಭಿಮಾನ ಮೆರೆದು ಅಶಾಂತಿ ಉಂಟುಮಾಡುತ್ತಿದ್ದಾರೆ. ನಾವು ಭಾರತೀಯರು ಎಂಬುದನ್ನು ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಲ್ಲರೂ ಎಲ್ಲ ಭಾಷೆಗಳನ್ನು ಗೌರವಿಸಿ ಮಾನವೀಯತೆ ಮೆರೆಯಬೇಕಾಗಿದೆ. ರಾಜ್ಯ ಗಡಿಯಲ್ಲಿ ಭಾಷೆಗಳ ನಡುವೆ ಕಂದಕ ಉಂಟುಮಾಡದೇ ಎಲ್ಲರೂ ಸಹೋದರರು ಎಂಬ ತತ್ವದಿಂದ ಬಾಳಬೇಕಾಗಿದೆ. ಇದರ ಗೊಜಲನ್ನು ಹೋಗಲಾಡಿಸಲು ಬಹುಭಾಷೆ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವನಾಥ ಗೊಂದಡಗಿ, ಲಿಂಗನಂದಗೋಗಿ, ಶಾಂತಪ್ಪ ಯಾಳಗಿ, ರಮೇಶ ಜಾಧವ್, ಸುಶಾಂತ ಡಗೆ, ಅಮೃತ್ತಮ್ಮ, ಶಾಂತ ಸೇರಿದಂತೆ 33 ಜನ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಉಪನ್ಯಾಸಕ ಅಖಂಡೇಶ್ವರ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಬುರ್ಗಿಯ ಹಜ್ರತ್ ಸೂಫಿ ಸರ್‌ಮಸ್ತ ಇಸ್ಲಾಮಿಕ್ ಸ್ಟಡಿ ಸರ್ಕಲ್ ಸಂಸ್ಥೆ ಅಧ್ಯಕ್ಷ ಅಜೀಜ್ ಉಲ್ಲ ಸರ್‌ಮಸ್ತ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂಧೂದರ್ ಸಿನ್ನೂರ, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನಿರೇಟಿ, ನರಸರೆಡ್ಡಿ ಗಡ್ಡೆಸುಗೂರ, ತಾಲೂಕು ಸರಕಾರಿ ನೌಕರರ ಪ್ರಾಥಮಿಕ ಶಾಲೆ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ ಪೊಲೀಸ್ ಪಾಟೀಲ ಸೇರಿದಂತೆ ಇತರರು ಇದ್ದರು.