ಚಿಕ್ಕಬಳ್ಳಾಪುರ: ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ರಥಕ್ಕೆ ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್, ಡೀಸಿ ಆರ್.ಲತಾ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಡೀಸಿ ಆರ್.ಲತಾ, ಜನಸಂಖ್ಯಾ ಸ್ಫೋಟದಿಂದ ಹಲವು ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಜನಸಂಖ್ಯೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಾಹನವು ಜಿಲ್ಲಾದ್ಯಂತ ಸಂಚ ರಿಸಿ ಜನರಿಗೆ ಜಾಗೃತಿ ಮೂಡಿಸಲಿದೆ ಎಂದು ವಿವರಿಸಿದರು.
ಸಂಪನ್ಮೂಲಗಳ ಕೊರತೆ: ಜನಸಂಖ್ಯಾ ಹೆಚ್ಚಳದಿಂದ ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜು.11ರಂದು ಪ್ರತಿವರ್ಷವೂ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ.ಈ ಕಾರ್ಯಕ್ರಮದ ಅಂಗವಾಗಿ ಜನಸಂಖ್ಯಾ ಸ್ಫೋಟದಿಂದ ಆಹಾರ, ನೀರು, ಬಟ್ಟೆ, ನೆಲ, ವಸತಿ ಹಾಗೂ ಖನಿಜಗಳ ಕೊರತೆ ಆಗಲಿದೆ ಎಂದು ಹೇಳಿದರು.
ಜನನಗಳ ಮಧ್ಯೆ 4 ವರ್ಷ ಅಂತರ ಇರಲಿ: ಜೊತೆಗೆ ಅರಣ್ಯ ನಾಶ, ಸಸ್ಯ ಸಂಪತ್ತಿನ ನಾಶ, ಬಡತನ, ನಿರುದ್ಯೋಗ ಹೆಚ್ಚಳವಾಗಲಿದೆ. ಶಿಕ್ಷಣ, ಆರೋಗ್ಯ ಸೇವೆಗಳು, ಇತರೆ ಸಂಪನ್ಮೂಲಗಳ ಕೊರತೆ ಆಗಲಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಮದುವೆ ಆಗಲು ಗಂಡಿಗೆ 21 ವರ್ಷ, ಹೆಣ್ಣಿಗೆ 18ವರ್ಷ ತುಂಬಿರಬೇಕು. ಮದುವೆ ಆದ ನಂತರ ಕನಿಷ್ಠ 3ವರ್ಷದವರೆಗೆ ಮಗು ಪಡೆಯಬಾರದು, ಜನನಗಳನಡುವೆ ಕಡೇ ಪಕ್ಷ 4 ವರ್ಷಗಳಾದರೂ ಅಂತರವಿರಬೇಕು ಎಂದು ಹೇಳಿದರು.
ನಿಯಂತ್ರಣ ನಿಯಮ ಪಾಲಿಸಿ: ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣದ ವಿಧಾನಗಳನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳುವುದು, ಪೋಷಕರು ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡುವುದು ಸೇರಿ ಹಲವು ಜನನ ನಿಯಂತ್ರಣ ಕಾರ್ಯಕ್ರಮ ರೂಪಿಸಿದ್ದು.ದಂಪತಿ ಈ ಕಾರ್ಯವನ್ನು ತಪ್ಪದೇ ಪಾಲಿಸಬೇಕು ಎಂದರು.ಡಿಎಚ್‌ಒ ಡಾ.ಇಂದಿರಾ ಆರ್.ಕಬಾಡೆ, ಉಪನಿರ್ದೇಶಕ ಶ್ರೀಧರ್, ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್ ಇದ್ದರು.
ಪ್ರತಿ ವರ್ಷ 8.40 ಲಕ್ಷ ಜನ ಸಂಖ್ಯೆ ಸೇರ್ಪಡೆ: ಡಾ.ಓಂಪ್ರಕಾಶ್ ಪಾಟೀಲ್ 1951 ರಲ್ಲಿ ಕರ್ನಾಟಕದ ಜನಸಂಖ್ಯೆ 1.66 ಕೋಟಿ ಇತ್ತು. 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.11ಕೋಟಿ ಇದ್ದು, ಪ್ರತಿ ವರ್ಷ 8.40 ಲಕ್ಷ ಜನಸಂಖ್ಯೆ ಸೇರಲ್ಪಡುತ್ತಿದೆ ಎಂದು ಚಾಲನೆ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಡಾ.ಓಂಪ್ರಕಾಶ್‌ಪಾಟೀಲ್‌ಹೇಳಿದರು.ಇದೇವೇಗದಲ್ಲಿ ಜನಸಂಖ್ಯೆಬೆಳೆಯುತ್ತಿದ್ದರೆ ಮುಂದಿನ 45 ವರ್ಷದಲ್ಲಿ ರಾಜ್ಯದ ಜನಸಂಖ್ಯೆಯು 12.25 ಕೋಟಿ ಆಗುವ ಸಾಧ್ಯತೆ ಇದೆ. ಬಡತನ, ಅಜ್ಞಾನ, ಮಾಹಿತಿ ಕೊರತೆ ಮೂಢನಂಬಿಕೆಗಳು, ಬಾಲ್ಯ ವಿವಾಹ, ಕಡಿಮೆ ಸಾಕ್ಷರತೆ ಪ್ರಮಾಣ ಕಾರಣಗಳಿಂದ ಜನಸಂಖ್ಯೆಯು ಹೆಚ್ಚಾಗುತ್ತಿದ್ದು. ಪ್ರತಿಯೊಬ್ಬರು ಕುಟುಂಬ ನಿಯಂತ್ರಣ ಕ್ರಮ ಪಾಲಿಸಬೇಕು ಎಂದು ಸಲಹೆ ನೀಡಿದರು.