Advertisement
ಸಂ”ಕ್ರಾಂತಿ’ಯ ಆಪರೇಷನ್ ಕಮಲ ವಿಫಲಗೊಳಿಸಿದ್ದ ಖುಷಿಯಲ್ಲಿದ್ದ ಕಾಂಗ್ರೆಸ್, ಶಾಸಕಾಂಗ ಪಕ್ಷದ ಸಭೆ ಕರೆದು ಶಕ್ತಿ ಪ್ರದರ್ಶನ ಮಾಡುವ ಪ್ರಯತ್ನ ಮಾಡಿದರೂ ಶಾಸಕರು ಕೈ ಕೊಡುವ ಆತಂಕ ಇನ್ನೂ ದೂರವಾಗದ ಕಾರಣ ರೆಸಾರ್ಟ್ ವಾಸ್ತವ್ಯಕ್ಕೆ ಮೊರೆ ಹೋಗಿದೆ. ಇತ್ತ ಕಾಂಗ್ರೆಸ್ ಶಾಸಕರು ಈಗಲ್ಟನ್ ರೆಸಾರ್ಟ್‌ಗೆ ತೆರಳು ತ್ತಿದ್ದಂತೆ, ಅತ್ತ ಬಿಜೆಪಿ ಇನ್ನೂ ಎರಡು ದಿನ ತನ್ನ ಶಾಸಕ ರನ್ನು ಗುರುಗ್ರಾಮದ ರೆಸಾರ್ಟ್‌ನಲ್ಲೇ ಉಳಿಸಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದೋಸ್ತಿ ಸರಕಾರಕ್ಕೆ ಆಪರೇಷನ್ ಕಮಲದ ಭೀತಿ ಇನ್ನೂ ದೂರ ವಾಗಿಲ್ಲ ಎಂದು ವಿಶ್ಲೇಷಿಸಲಾಗಿದ್ದರೆ, ಬಿಜೆಪಿಯ ಆಪರೇಷನ್ ಮೇಲಿನ ಆಶಾಭಾವವೂ ಕಡಿಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೆ ಪಕ್ಷದ ನಾಯಕರ ನಿರೀಕ್ಷೆಯಂತೆ 75 ಜನ ಶಾಸಕರು ಆಗಮಿಸಿ ರಮೇಶ್ ಜಾರಕಿಹೊಳಿ, ನಾಗೇಂದ್ರ, ಉಮೇಶ್ ಜಾಧವ್, ಮಹೇಶ್ ಕುಮಠಳ್ಳಿ ಗೈರು ಹಾಜರಾಗಿದ್ದರು. ನಾಲ್ವರ ಗೈರು ಹಾಜರಿ ಮತ್ತು ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯವನ್ನೇ ಬಿಜೆಪಿ “ಅಸ್ತ್ರ’ವಾಗಿ ಬಳಸಿ ತಮ್ಮ ಗೇಮ್ ಪ್ಲ್ರಾನ್ ಇನ್ನೂ ಮುಗಿದಿಲ್ಲ ಎಂಬ ಸಂದೇಶ ರವಾನಿಸಿದೆ. ಈ ನಾಲ್ಕೂ ಶಾಸಕ ರಿಗೆ ನೋಟಿಸ್ ನೀಡುವುದಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
Related Articles
ಶಿಸ್ತು ಕ್ರಮದ ಬೆದರಿಕೆಯ ಹಿನ್ನೆಲೆಯಲ್ಲಿಯೂ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿರುವ ಕಾಂಗ್ರೆಸ್‌ನ ನಾಲ್ವರು ಶಾಸಕರು ಶನಿವಾರ ಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಂಬಯಿಯಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ, ಮುಂಬಯಿಯಿಂದ ವಾಪಸ್ ಬಂದು ಮತ್ತೆ ಮುಂಬಯಿ ರೆಸಾರ್ಟ್‌ಗೆ ತೆರಳಿರುವ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಮತ್ತು ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಯಾರು ರಾಜೀನಾಮೆ ನೀಡದಿದ್ದರೂ ತಾವು ರಾಜೀನಾಮೆ ನೀಡುವುದಾಗಿ ಆಪ್ತರ ಬಳಿ ಹೇಳಿಕೊಂಡಿ ದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಶನಿವಾರ ಮುಂಬಯಿಯಿಂದ ಆಗಮಿಸಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.