ಅಹ್ಮದಾಬಾದ್/ ಜೈಪುರ: ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಗುಜರಾತ್‌ನಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ.
ವಿಪಕ್ಷ ಕಾಂಗ್ರೆಸ್‌ಗೆ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಮತ್ತಷ್ಟು ಮಂದಿಯನ್ನು ಬಿಜೆಪಿ ಸೆಳೆಯುವುದನ್ನು ತಪ್ಪಿಸಲು ಪಕ್ಷದ ವರಿಷ್ಠ ಮಂಡಳಿ 65 ಮಂದಿ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿದೆ.
ರವಿವಾರ ಶಾಸಕರನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ರಾಜ್‌ಕೋಟ್, ಬನಸ್‌ಕಾಂತ ಜಿಲ್ಲೆಯಲ್ಲಿರುವ ಅಂಬಾಜಿ ಹಾಗೂ ವಡೋದರಾ ಬಳಿ ಇರುವ ರೆಸಾರ್ಟ್‌ಗಳಲ್ಲಿ ಇರಿಸಲಾಗಿತ್ತು. ಕಾಂಗ್ರೆಸ್‌ಗೆ ಮತ್ತಷ್ಟು ಸಂಕಟದ ಸ್ಥಿತಿ ಎನ್ನುವಂತೆ ರಾಜ್‌ಕೋಟ್‌ನಲ್ಲಿ ಶಾಸಕರು ತಂಗಿರುವ ರೆಸಾರ್ಟ್ ವಿರುದ್ಧ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಈ ನಡುವೆ, ರವಿವಾರ 21 ಶಾಸಕರನ್ನು ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬುರಸ್ತೆ ಬಳಿಯ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಸೋಮವಾರ ಮತ್ತಷ್ಟು ಶಾಸಕರು ಈ ರೆಸಾರ್ಟ್‌ನಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ರವಿವಾರ ತಿಳಿಸಿದ್ದಾರೆ.
ಬೆಳವಣಿಗೆ ವಿರುದ್ಧ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಚವಡಾ ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಕೋವಿಡ್ ವೈರಸ್‌ನಿಂದಾಗಿ ಜನರು ತೊಂದರೆಗೆ ಒಳಗಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸರಕಾರ ಜನರ ಯೋಗ ಕ್ಷೇಮ ವಿಚಾರಿಸಬೇಕು. ಅದರ ಬದಲಾಗಿ ಶಾಸಕರ ಖರೀದಿ ಮತ್ತು ಅವರನ್ನು ಬೆದರಿಸುವ ತಂತ್ರದಲ್ಲಿ ನಿರತವಾಗಿದೆ ಎಂದು ದೂರಿದ್ದಾರೆ.
19ರಂದು ಚುನಾವಣೆ:
ಗುಜರಾತ್‌ನಿಂದ ತೆರವಾಗಿರುವ 4 ರಾಜ್ಯಸಭಾ ಸ್ಥಾನಗಳಿಗೆ ಜೂ. 19ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಕನಿಷ್ಠ 2 ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನದಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ. ಇನ್ನುಳಿದ ಒಂದು ಸ್ಥಾನಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಬಿಜೆಪಿ ಈ ಸ್ಥಾನವನ್ನು ತನ್ನ ವಶಕ್ಕೆ ಪಡೆಯಲು ಕಾರ್ಯತಂತ್ರ ರೂಪಿಸುತ್ತಿದೆ.
ಮಾರ್ಚ್‌ನಿಂದ ಇದುವರೆಗೂ 8 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. 182 ಸದಸ್ಯತ್ವ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ-103, ಕಾಂಗ್ರೆಸ್ -65, ಭಾರತೀಯ ಟ್ರೈಬಲ್ ಪಾರ್ಟಿ-2, ಎನ್‌ಸಿಪಿ-1 ಶಾಸಕರಿದ್ದಾರೆ. ಅಲ್ಲದೆ ಓರ್ವ ಪಕ್ಷೇತರ ಶಾಸಕ ಕೂಡ ಇದ್ದಾರೆ.