Advertisement

ಅನಾರೋಗ್ಯಕ್ಕೆ ಕಾರಣ

08:04 PM Aug 28, 2019 | mahesh |

ವಿಂಧ್ಯ ಪರ್ವತದ ಬಳಿಯ ರಾಜ್ಯವನ್ನು ಆಳುತ್ತಿದ್ದ ಚಂದ್ರಸೇನ ಮಹಾರಾಜ ಪದೇ ಪದೆ ಅನಾರೋಗ್ಯ ಪೀಡಿತರಾಗುತ್ತಿದ್ದರು. ಉಸಿರಾಡಲು ಸ್ವಚ್ಛ ಗಾಳಿ ಇಲ್ಲದೇ ಇದ್ದುದು ಅದಕ್ಕೆ ಕಾರಣವಾಗಿತ್ತು. ಏಕೆಂದರೆ, ಅರಮನೆ ಸನಿಹ ಹೂದೋಟ ಇರಲಿಲ್ಲ. ಮಂತ್ರಿಗಳು, ಮಹಾರಾಣಿಯವರು ಅರಮನೆಯ ಅಂಗಳದಲ್ಲಿ ಒಂದು ಉದ್ಯಾನವನವನ್ನು ಬೆಳೆಸಬೇಕು ಎಂದು ಸಲಹೆ ಇತ್ತರೂ ಅದೇಕೋ ಮಹಾರಾಜರು ನಿರ್ಲಕ್ಷ್ಯ ವಹಿಸಿದ್ದರು. ರಾಜರಿಗೆ ದೇಶ- ವಿದೇಶಗಳಿಂದ ತರಿಸುತ್ತಿದ್ದ ಕರಕುಶಲ ವಸ್ತುಗಳ ಮೇಲಿದ್ದ ಪ್ರೀತಿ, ಆಸಕ್ತಿ ಗಿಡ ಮರಗಳ ಮೇಲೆ ಇರಲಿಲ್ಲ.

Advertisement

ಒಮ್ಮೆ ಚಂದ್ರಸೇನ, ಕೆಲಸದ ಮೇರೆಗೆ ನೆರೆ ರಾಜ್ಯದ ಮಹಾರಾಜನೂ, ಸ್ನೇಹಿತನೂ ಆದ ನಂದಿ ವರ್ಮನ ಅರಮನೆಗೆ ಭೇಟಿ ನೀಡಿದರು. ಒಂದು ದಿನ ವಿಶ್ರಾಂತಿಗೆಂದು ಅಲ್ಲಿಯೇ ತಂಗಿದ್ದರು. ಚಂದ್ರಸೇನರಾಜ ನಸುಕಿನ ಜಾವ ಎದ್ದು, ಉಪಹಾರಗಳನ್ನೆಲ್ಲ ಮುಗಿಸಿ ಹೊರಡಲು ಅಣಿಯಾದರು. ನಂದಿವರ್ಮನ ಅರಮನೆಯನ್ನೂ ಮತ್ತು ಅದನ್ನು ಸಿಂಗರಿಸಿದ ಆತನ ಕಲಾರಸಿಕತೆಯನ್ನೂ ಕೊಂಡಾಡುತ್ತಾ ಅರಮನೆಯ ಹೊರಗೆ ಬಂದರು. ಅರಮನೆಯ ಹೊರಗಡೆ ನೋಡಿದರೆ ಪುಟ್ಟದಾದ ಕಾಡೊಂದು ತಲೆಯೆತ್ತಿ ನಿಂತಿತ್ತು.

ಅರಮನೆಯ ಸುತ್ತ, ಎಲ್ಲಿ ನೋಡಿದರಲ್ಲಿ ಹೂದೋಟ, ಬಲಾಡ್ಯವಾದ ವೃಕ್ಷಗಳು ಮತ್ತು ಹಣ್ಣಿನ ಮರಗಳು. ಬೆಳಗಿನ ಜಾವದಲ್ಲಿ ಹೊರಸೂಸುವ ತಂಗಾಳಿ, ಹಕ್ಕಿಗಳ ಚಿಲಿಪಿಲಿ, ಹೂಹಣ್ಣುಗಳ ಸುವಾಸನೆಯಿಂದ ಚಂದ್ರಸೇನ ರಾಜನಿಗೆ ಹೊಸದೊಂದು ಉನ್ಮಾದ ಮೂಡಿತ್ತು. ತನ್ನ ಅರಮನೆಗಿಂತ ಬಹುಪಾಲು ಚಿಕ್ಕದಾದ ನಂದಿವರ್ಮನ ಅರಮನೆಯು ಗಿಡಮರಗಳಿಂದ ಸುತ್ತುವರಿದು ಸೊಬಗಿನಿಂದ ಕಂಗೊಳಿಸುತ್ತಿತ್ತು.

ತನ್ನ ರಾಜ್ಯಕ್ಕೆ ಮರಳಿದ ಚಂದ್ರಸೇನರಾಜನು ಮಂತ್ರಿಗಳನ್ನು ಕರೆಯಿಸಿ ಕೂಡಲೇ ಅರಮನೆಯ ಸುತ್ತ ಕಾಡನ್ನು ನಿರ್ಮಿಸಲು ಆಜ್ಞೆಯಿತ್ತನು. ಮಂತ್ರಿಯೂ ಅತ್ಯಂತ ಆನಂದ ಭರಿತನಾಗಿ ರಾಜನ ಆಜ್ಞೆಯಂತೆ ಗಿಡಮರಗಳ ಕೆಲಸ ಕಾರ್ಯದಲ್ಲಿ ಚುರುಕಾದನು. ಕೆಲವೇ ವರ್ಷಗಳಲ್ಲಿ ಅರಮನೆಯು ಆಲಂಕೃತಗೊಂಡ ಗಿಡಮರಗಳಿಂದ ರಾರಾಜಿಸುತ್ತಿತ್ತು. ರಾಜಭವನದ ಸೌಂದರ್ಯ ಹಿಂದೆಂದಿಗಿಂತಲೂ ದ್ವಿಗುಣಗೊಂಡಿತ್ತು. ಅರಮನೆಯು ಶ್ರೀಕೃಷ್ಣನ ಬೃಂದಾವನವನ್ನೇ ಜ್ಞಾಪಿಸುವಂತಿತ್ತು. ರಾಜನಿಗೆ ಮುದನೀಡುವ ಆಹ್ಲಾದಕರ ವಾತಾವರಣ ನಿರ್ಮಾಣಗೊಂಡಿತ್ತು. ಅಲ್ಲದೆ ಉಸಿರಾಡಲು ಸ್ವಚ್ಛ ಗಾಳಿ ಸಿಕ್ಕಿ ಮಹಾರಾಜನ ಅನಾರೋಗ್ಯ ಕೊನೆಯಾಗಿತ್ತು.

– ಶಿಲ್ಪಾ ಕುಲಕರ್ಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next