ಮದ್ದೂರು: ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಗಣೇಶ್ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ, ತಾಲೂಕು ಕಾನೂನು ಸೇವೆ ಗಳ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ತ್ರೆಮಾಸಿಕ ಜನತಾ ನ್ಯಾಯಲಯಕ್ಕೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳ ಬಗ್ಗೆ ಮತ್ತು ವಿವಿಧ ಇಲಾಖೆಗೆ ಸಂಬಂಧ ಪಟ್ಟ ವ್ಯಾಜ್ಯ ಪೂರ್ವ ಪ್ರಕರಣ ಗಳನ್ನು ಇಂತಹ ಜನತಾ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳುವ ಜತೆಗೆ ಸಮಯ ಹಾಗೂ ಹಣ ಉಳಿಸಬೇಕೆಂದು ಕಿವಿಮಾತು ಹೇಳಿದರು.
ಕಕ್ಷಿದಾರರು, ವಕೀಲರು ಹಾಗೂ ಸಾರ್ವಜನಿಕರು ನ್ಯಾಯಾಲಯದ ವತಿಯಿಂದ ಆಯೋಜಿಸುವ ಜನತಾ ನ್ಯಾಯಾಲಯದಲ್ಲಿ ಪಾಲ್ಗೊಂಡು ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗ ಬೇಕೆಂದು ತಿಳಿಸಿದರಲ್ಲದೇ ಗ್ರಾಮೀಣ ಭಾಗದ ಜನರಿಗೆ ಇಂತಹ ಅದಾಲತ್‌ಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದರು. ಜನತಾ ನ್ಯಾಯಾಲಯದಲ್ಲಿ ಅಪಘಾತ ವಿಮೆ 38, ಸಿವಿಲ್ 54, ಭೂಸ್ವಾಧೀನ 6, ಚೆಕ್ ಬೌನ್ಸ್ 75, ಇತರೆ ಸಿವಿಲ್ 34, ಕ್ರಿಮಿ ನಲ್ 26, ಇತರೆ ಕ್ರಿಮಿನಲ್ ಪ್ರಕರಣ 251 ಒಟ್ಟು 484 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ ಎಂದರು.
ವಾಹನ ಅಪಘಾತ ಪ್ರಕರಣ 91.83 ಲಕ್ಷ, ಭೂಸ್ವಾಧೀನ 39 ಲಕ್ಷ, ಚೆಕ್‌ಬೌನ್ಸ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ 2.20 ಕೋಟಿ ರೂ. ಪರಿಹಾರವಾಗಿ ನೀಡುವಂತೆ ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ವೇಳೆ ನ್ಯಾಯಾಧೀಶರಾದ ಶಿವಕುಮಾರ್, ಪಿ.ಎಂ. ಬಾಲಸುಬ್ರಹ್ಮಣಿ, ಸೋಮನಾಥ್, ಆದಿತ್ಯ ಆರ್.ಕಲಾಲ್, ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಸತ್ಯಪ್ಪ, ಉಪಾಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಶಿವಣ್ಣ ಇದ್ದರು.