ಬೆಂಗಳೂರು: ಬಿಜೆಪಿ ಸದಸ್ಯರ ಗದ್ದಲ, ಮಹಿಳಾ ಕಾರ್ಪೊರೇಟರ್‌ಗಳ ಕಣ್ಣಿರ ನಡುವೆಯೇ ಪಾದಚಾರಿ ಮೇಲ್ಸೇತುವೆಗಳ ನಿರ್ಮಾಣ, ರಸ್ತೆ ಅಗಲೀಕರಣ, ಪ್ರತ್ಯೇಕ ಘನತ್ಯಾಜ್ಯ ವಿಭಾಗ ಸ್ಥಾಪನೆ, ಆರೋಗ್ಯ ಅಧಿಕಾರಿಗಳ ನೇಮಕದಂತಹ ಹಲವು ನಿರ್ಣಯಗಳಿಗೆ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಅನುಮೋದನೆ ಪಡೆಯಿತು.
ವಿಷಯಗಳನ್ನು ಚರ್ಚಿಸಬೇಕು ಮತ್ತು ಮತಕ್ಕೆ ಹಾಕಬೇಕು ಎಂದು ಬಿಜೆಪಿ ಒತ್ತಾಯಿಸಿತಾದರೂ, ಕಾಂಗ್ರೆಸ್ ಹಲವು ನಿರ್ಣಯಗಳಿಗೆ ಅನುಮೋದನೆ ಪಡೆಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿದ ಬಿಜೆಪಿ ಸದಸ್ಯರು, ಕೋರಂ ಇಲ್ಲದ ಸಮಯದಲ್ಲಿ ನಿರ್ಣಯಗಳಿಗೆ ಅನುಮೋದನೆ ಪಡೆದಿರುವುದು ಕಾನೂನು ಬಾಹಿರ ಎಂದು ಆರೋಪಿಸಿದ್ದಾರೆ.
ಸ್ಕೈವಾಕ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಹೀರಾತು ಏಜೆನ್ಸಿಗಳು ಪಾಲಿಕೆಗೆ ಸಮರ್ಪಕವಾಗಿ ತೆರಿಗೆ ಪಾವತಿಸಿಲ್ಲ ಎಂದು ಬಿಜೆಪಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ವಿರೋಧ ವ್ಯಕ್ತಪಡಿಸಿತು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದಿನ ಸಭೆಯಲ್ಲಿ ಪಾದಚಾರಿ ಮೇಲ್ಸೇತುವೆಗಳ ನಿರ್ಣಯಕ್ಕೆ ಅನುಮೋದನೆ ದೊರಕಿರಲಿಲ್ಲ.
ಪ್ರಕಾಶ್ ಆರ್ಟ್ಸ್, ಆಕಾರ್ಡ್ ಜಾಹೀರಾತು ಸಂಸ್ಥೆ, ರಿಪ್ಪಲ್ ಮೀಡಿಯಾ ಸಂಸ್ಥೆಗಳು ಸಾರ್ವಜನಿಕ ಸರ್ಕಾರಿ ಸಹಭಾಗಿತ್ವದ ಅಡಿಯಲ್ಲಿ 16 ಕಡೆ ಸ್ಕೈವಾಕ್ ನಿರ್ಮಾಣಕ್ಕೆ ಗುತ್ತಿಗೆ ಪಡೆದಿವೆ. ಆದರೆ ಹಲವು ಸಂಸ್ಥೆಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಪಾಲಿಕೆ ಜಾಹೀರಾತು ಮತ್ತು ನೆಲ ಬಾಡಿಗೆ ಪಾವತಿಸದೆ ವಂಚಿಸಿವೆ ಎಂಬ ಆರೋಪವಿದೆ.
ಆದರ ನಡುವೆಯೇ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪಾಲಿಕೆ ಸದಸ್ಯರು ಆರೋಪಿಸಿದರು.ಗುತ್ತಿಗೆ ಪಡೆಯುವ ಸಂಸ್ಥೆಗಳು ಪಾಲಿಕೆಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸಿದ ನಂತರವಷ್ಟೇ ಅವರಿಗೆ ಕಾರ್ಯಾದೇಶ ಪತ್ರ ನೀಡುವುದಾಗಿ ಮೇಯರ್ ಜಿ.ಪದ್ಮಾವತಿ ಅವರು ಸಮರ್ಥಿಸಿಕೊಂಡರು.