Advertisement

Resolution: ಜಿಂದಾಲ್‌ಗೆ 3,667.31 ಎಕರೆ ಭೂಮಿ ನೀಡಲು ರಾಜ್ಯ ಸರಕಾರದ ಒಪ್ಪಿಗೆ

01:33 AM Aug 23, 2024 | Team Udayavani |

ಬೆಂಗಳೂರು: ಹಿಂದಿನ ಸರಕಾರದ ಅವಧಿಯಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ನಿರ್ಣಯವೊಂದಕ್ಕೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಗಿದ್ದು, ಪ್ರತೀ ಎಕರೆಗೆ 1.22ರಿಂದ 1.50 ಲಕ್ಷ ರೂ.ನಂತೆ ಜೆಎಸ್‌ಡಬ್ಲ್ಯು ಸಂಸ್ಥೆಗೆ (ಜಿಂದಾಲ್‌) 3667.31 ಎಕರೆ ಜಮೀನನ್ನು ಶುದ್ಧ ಕ್ರಯಪತ್ರ ಮಾಡಿಕೊಡಲು ಒಪ್ಪಿಗೆ ನೀಡಲಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಹಾಗೂ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಪ್ರಸ್ತಾವ ಮುನ್ನೆಲೆಗೆ ಬಂದಾಗ ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಹಾಗೂ ಇಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ್‌ ಬಲವಾಗಿ ವಿರೋಧಿಸಿದ್ದರು. ಆದರೆ ಇಂದು ಎಚ್‌.ಕೆ. ಪಾಟೀಲ್‌ ಖುದ್ದಾಗಿ ಸಂಪುಟ ನಿರ್ಣಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ್ದಾರೆ.

ಭೂಮಿ ನೀಡಿದ್ದು ಎಲ್ಲಿ?:
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು, ಕುರೇಕುಪ್ಪೆ ಗ್ರಾಮದಲ್ಲಿ 2,000.58 ಎಕರೆ ಹಾಗೂ ಮುಸೇನಾಕನಹಳ್ಳಿ, ಯರಬನಹಳ್ಳಿ ಗ್ರಾಮದಲ್ಲಿ 1,666.73 ಎಕರೆ ಸೇರಿದಂತೆ ಒಟ್ಟು 3,667.31 ಎಕರೆ ಜಮೀನನ್ನು ಶುದ್ಧ ಕ್ರಯಪತ್ರ ಮಾಡಿಕೊಡಲು ಒಪ್ಪಿಗೆ ನೀಡಲಾಗಿದೆ. 2006ರಿಂದಲೂ ಈ ಪ್ರಸ್ತಾವ ಆಗಾಗ ಚರ್ಚೆಗೆ ಬರುತ್ತಿದ್ದು ಈಗ ಅಂತಿಮವಾಗಿ ಇತ್ಯರ್ಥಗೊಂಡಿದೆ.

ಇದೇ ಜಾಗವನ್ನು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದ ಅವಧಿಯಲ್ಲಿ (2019ರಲ್ಲಿ) ಜಿಂದಾಲ್‌ಗೆ ಹಸ್ತಾಂತರಿಸಲು ಪ್ರಯತ್ನ ನಡೆಸಲಾಗಿತ್ತು. ಆದರೆ ಬಿಜೆಪಿ ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಎಚ್‌.ಕೆ. ಪಾಟೀಲ್‌ ಬಲವಾಗಿ ವಿರೋಧಿಸಿದ್ದರು. ಬಿಜೆಪಿಯಂತೂ ಈ ಸಂಬಂಧ ಅಹೋರಾತ್ರಿ ಧರಣಿ ನಡೆಸಿತ್ತು.

ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನೂ ರಚಿಸಲಾಗಿತ್ತು. ಆದರೆ ಜಗದೀಶ್‌ ಶೆಟ್ಟರ್‌ ಕೈಗಾರಿಕಾ ಸಚಿವರಾಗಿದ್ದಾಗ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಜಿಂದಾಲ್‌ಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಸಂಪುಟದ ಮುಂದೆ ಬಂದಿತ್ತು. ಸ್ವಪಕ್ಷೀಯರ ವಿರೋಧದ ಮಧ್ಯೆ ಒಪ್ಪಿಗೆ ನೀಡಲಾಗಿತ್ತು. ಆದರೆ ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಕ್ಕಾಗಿ ಅದು ನ್ಯಾಯಾಲಯದ ಮೆಟ್ಟಿಲು ಏರಿತ್ತು. ಈಗ ಕಾಂಗ್ರೆಸ್‌ ಸರಕಾರ ಈ ವಿವಾದವನ್ನು ಅಂತಿಮವಾಗಿ ಇತ್ಯರ್ಥಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next