Advertisement

ಪ್ಲಾಸ್ಟಿಕ್‌ ಮುಕ್ತ ಪರಿಷೆಗೆ ಸಂಕಲ್ಪ

11:55 AM Dec 02, 2018 | |

ಬೆಂಗಳೂರು: ಕಡೆಯ ಕಾರ್ತಿಕ ಸೋಮವಾರ ಬಸವನಗುಡಿಯ ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ನಡೆಯುವ ಕಡಲೆಕಾಯಿ ಪರಿಷೆಯನ್ನು ಈ ಬಾರಿ ಪರಿಸರಸ್ನೇಹಿಯಗಿ ಆಚರಿಸುವ ಆಶಯ ವ್ಯಾಪಕವಾಗಿದೆ. ರಾಮಕೃಷ್ಣ ಆಶ್ರಮ ವೃತ್ತದಿಂದ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನವರೆಗೆ ಹಾಗೂ ಸುಂಕೇನಹಳ್ಳಿಯ ಕೆಲ ರಸ್ತೆಗಳಲ್ಲಿ ಈಗಾಗಲೇ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ.

Advertisement

ಈ ಬಾರಿ ಪ್ಲಾಸ್ಟಿಕ್‌ ಮುಕ್ತ ಪರಿಷೆ ಆಚರಣೆಗೆ ಮುಜರಾಯಿ ಇಲಾಖೆ ಮತ್ತು ಬಿಬಿಎಂಪಿ ಒತ್ತು ನೀಡಿದ್ದು, ಇದಕ್ಕೆ ವ್ಯಾಪಾರಿಗಳು ಕೂಡ ಸ್ಪಂದಿಸಿದ್ದಾರೆ. ಸದಾ ಪ್ಲಾಸ್ಟಿಕ್‌ ಚೀಲಗಳಲ್ಲಿ ನೀಡುತ್ತಿದ್ದ ಕಡಲೆಕಾಯಿಯನ್ನು ಈ ಬಾರಿ ಪೇಪರ್‌ ಬ್ಯಾಗ್‌ನಲ್ಲಿ ನೀಡಲಾಗುತ್ತಿದೆ. ಬಹುತೇಕ ವ್ಯಾಪಾರಿಗಳ ಬಳಿ ದೊಡ್ಡ ಪೇಪರ್‌ ಬ್ಯಾಗ್‌ ಇಲ್ಲದ ಕಾರಣ ಸಮಸ್ಯೆಯಾಗಿದೆ. ಹೀಗಾಗಿ ವ್ಯಾಪಾರಿಗಳು ಮನೆಯಿಂದಲೇ ಕೈಚೀಲ ತರುವಂತೆ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ. ಕೆಲವೆಡೆ ವ್ಯಾಪಾರಿಗಳು ಪ್ಲಾಸ್ಟಿಕ್‌ ಚೀಲ ಬಳಸುತ್ತಿರುವುದು ಕಂಡುಬಂತು.

ಕಳೆದ ವರ್ಷ ಕಡಲೆಕಾಯಿ ಪರಿಷೆ ಸಮಿತಿಯವರೇ ನಮಗೆ ಬಟ್ಟೆ ಚೀಲಗಳನ್ನು ಹಂಚುತ್ತಿದ್ದರು. ಈ ಬಾರಿ ಇನ್ನೂ ಆ ಚೀಲಗಳನ್ನು ನೀಡಿಲ್ಲ. ಹೀಗಾಗಿ ನಾವು ಮಾಡಿದ ಸಣ್ಣ ಪೇಪರ್‌ ಬ್ಯಾಗ್‌ನಲ್ಲಿ ಕಡಲೆಕಾಯಿ ನೀಡಬೇಕಿದೆ. ಇದು ಬೇಗ ಹರಿದುಹೋಗುತ್ತದೆ. ಹೀಗಾಗಿ ದೇವಸ್ಥಾನದ ಸಮಿತಿಯವರು ಪೇಪರ್‌ ಬ್ಯಾಗ್‌ ನೀಡಬೇಕು ಎಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ಕಡಲೇಕಾಳು ಅಭಿಷೇಕ: ಭಾನುವಾರ ಸಂಜೆ 6.30ಕ್ಕೆ ದೊಡ್ಡ ಗಣಪತಿಗೆ ಹಾಗೂ ಸೋಮವಾರ ಬೆಳಗ್ಗೆ 10ಕ್ಕೆ ದೊಡ್ಡ ಬಸವಣ್ಣನಿಗೆ ತಲಾ 150ರಿಂದ 200 ಲೀಟರ್‌ ಕಡಲೆಕಾಳುಗಳಿಂದ ಅಭಿಷೇಕ ನೆರವೇರಿಸಲಾಗುವುದು. ಸೋಮವಾರ ದೊಡ್ಡ ಗಣಪತಿ ಮೂರ್ತಿಗೆ ಬೆಣ್ಣೆ ಅಲಂಕಾರ ಹಾಗೂ ದೊಡ್ಡ ಬಸವಣ್ಣ ಮೂರ್ತಿಗೆ ಕಡಲೆಕಾಳು ಹಾರದ ಅಲಂಕಾರ ಮಾಡಲಾಗುವುದು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.

ಪರಿಷೆಯ ಇತಿಹಾಸ: ಹಿಂದೆ ಸುಂಕೇನಹಳ್ಳಿ ಹಾಗೂ ಸುತ್ತಮುತ್ತ ರೈತರು ಕಡಲೆಕಾಯಿ ಬೆಳೆಯುತಿದ್ದರು. ಇದನ್ನು ಬಸವಣ್ಣ ತಿನ್ನುತ್ತಿದ್ದರಿಂದ ರೈತರಿಗೆ ಬೆಳೆ ಸಿಗುತ್ತಿರಲಿಲ್ಲ. ಹೀಗಾಗಿ ರೈತರೆಲ್ಲರೂ ಸೇರಿ ತಾವು ಬೆಳೆದ ಕಡಲೆಕಾಯಿಯನ್ನು ಎರಡು ದಿನಗಳ ಕಾಲ ಬಸವಣ್ಣನಿಗೆ ಸಮರ್ಪಿಸಲು ನಿರ್ಧರಿಸಿದರು. ಈ ರೀತಿ ಪ್ರತಿ ವರ್ಷ ಕಡಲೆಕಾಯಿ ಬೆಳೆ ಬಂದ ನಂತರ ರೈತರು ಎರಡು ದಿನ ಬಸವಣ್ಣನಿಗೆ ಕಡಲೆಕಾಯಿ ಸಮರ್ಪಿಸುತ್ತ ಬಂದರು. ಹೀಗೆ ಕಡಲೆಕಾಯಿ ಪರಿಷೆ ಆರಂಭವಾಯಿತು ಎಂಬ ಪ್ರತೀತಿ ಇದೆ.

Advertisement

ನಂದಿಧ್ವಜ ಕುಣಿತ, ದೀಪೋತ್ಸವ: ಸೋಮವಾರ ಸಂಜೆ ದೊಡ್ಡ ಬಸವಣ್ಣ ದೇವಾಲಯದ ಮುಂದೆ ನಂದಿ ಧ್ವಜದ ನೃತ್ಯ ನಡೆಯಲಿದೆ. ಕಬ್ಬನ್‌ ಪೇಟೆಯಿಂದ ಕಲಾವಿದರು ಬರಲಿದ್ದು, ಗವಿಪುರಂ ಗುಟ್ಟಹಳ್ಳಿ, ಲಕ್ಷ್ಮೀಪುರ, ಸುಂಕೇನಹಳ್ಳಿ, ಬಸಪ್ಪ ಬಡಾವಣೆ ಸೇರಿದಂತೆ ಬಸವನಗುಡಿ ಸುತ್ತಮುತ್ತಲ ಪ್ರದೇಶಗಳ ಮಹಿಳೆಯರು ಅಕ್ಕಿ ಮತ್ತು ಆರತಿ ಹೊತ್ತು ಬರಲಿದ್ದಾರೆ. ಮೆರವಣಿಗೆ ದೊಡ್ಡ ಬಸವನಗುಡಿ ತಲುಪಿದ ನಂತರ ಮಹಿಳೆಯರು ದೊಡ್ಡ ಬಸವಣ್ಣನಿಗೆ ಆರತಿ ಬೆಳಗಿ ಪ್ರಾರ್ಥಿಸಲಿದ್ದಾರೆ. ರಾತ್ರಿ 8 ರಿಂದ 10.30ರವರೆಗೆ ನಂದಿಧ್ವಜದ ಕುಣಿತ ನಡೆಯಲಿದೆ.

ಗೂಳಿಗೆ ವಿಶೇಷ ಪೂಜೆ: ಕಳೆದ 8 ವರ್ಷದಿಂದ ದೇವಸ್ಥಾನದ ಜಾಗದಲ್ಲಿಯೇ ಸಾಕಿರುವ ಬಸವಣ್ಣನಿಗೆ (ಗೂಳಿ) ಪರಿಷೆ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು. ಚಾಲಕರಾಗಿರುವ ಗಿರಿ ಮತ್ತು ನಾಗ ಅವರು ದೇವಸ್ಥಾನದ ಪಕ್ಕದಲ್ಲಿರುವ ಜಾಗದಲ್ಲಿ ಗೂಳಿಯನ್ನು ಕಟ್ಟಿ ಸಾಕುತ್ತಿದ್ದಾರೆ. ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ಬೆಳಗ್ಗೆ ಮಹಾಮಂಗಳಾರತಿ ಸಂದರ್ಭದಲ್ಲಿ ಗೂಳಿಗೂ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಗುವುದು.

ಅನಂತಕುಮಾರ್‌ ಇಲ್ಲದ ಪರಿಷೆ: ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಬಸವನಗುಡಿಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಂತಕುಮಾರ್‌, ಸಂಸದರಾದಾಗಿನಿಂದಲೂ ಪ್ರತಿ ವರ್ಷ ಕಡಲೆಕಾಯಿ ಪರಿಷೆಯನ್ನು ಉದ್ಘಾಟಿಸುತ್ತಿದ್ದರು. ಈ ಬಾರಿ ಉಪಮುಖ್ಯಮಂತ್ರಿ ಪರಮೇಶ್ವರ್‌ ಬೆಳಗ್ಗೆ 1ಂಗಂಟೆಗೆ  ಕಡಲೆಕಾಯಿ ತೂಕ ಹಾಕುವ ಮೂಲಕ ಉದ್ಘಾಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next