ಮಂಡ್ಯ/ ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಬಂದಿದ್ದ ಪುಣೆಯ ವಿಜ್ಞಾನಿಗಳ ತಂಡ ಸೋಮವಾರ ದಿನವಿಡೀ ಚಳವಳಿಗಾರರಿಗೆ ಹೆದರಿ ಹೋಟೆಲ್‌ನಲ್ಲಿ ಉಳಿದಿದ್ದಾರೆ. ಜಲಾಶಯದ 20 ಕಿಮೀ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ ರೈತ ಹೋರಾಟಗಾರರ ಗೋ-ಬ್ಯಾಕ್ ಚಳವಳಿ ಕೈಗೊಂಡಿದ್ದಾರೆ.
ಕೆಆರ್‌ಎಸ್ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟೆ ಸುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಪುಣೆಯಿಂದ ತಜ್ಞರ ತಂಡ ಆಗಮಿಸಿತ್ತು. ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಕಾಯಕಲ್ಪ ಸಚಿವಾಲಯದ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ ಪ್ರೊ.ಎ.ಕೆ.ಘೋಷ್ ನೇತೃತ್ವದ ನಾಲ್ವರು ವಿಜ್ಞಾನಿಗಳ ತಂಡ ಸೋಮವಾರ ಹೊಸ ಬನ್ನಂಗಾಡಿ ಹಾಗೂ ಬೇಬಿ ಬೆಟ್ಟದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಸಜ್ಜಾಗಿತ್ತು.
ಸೋಮವಾರ ಪುಣೆಯ ಸಿಡಬ್ಲೂಪಿಆರ್‌ಸಿ ತಂಡದ ನಾಲ್ವರು ವಿಜ್ಞಾನಿಗಳು ಪರೀಕ್ಷಾರ್ಥ ಸ್ಫೋಟ ಸ್ಥಳಕ್ಕೆ ತೆರಳುವ ಮುನ್ನವೇ ಪ್ರಗತಿಪರರು ಹಾಗೂ ರೈತ ಹೋರಾಟಗಾರರು ಗೋ ಬ್ಯಾಕ್ ಚಳವಳಿ ನಡೆಸುವ ಮೂಲಕ ಅಡ್ಡಿಪಡಿಸಿದರು.ಇದೇ ಸಮಯದಲ್ಲೇ ಗಣಿ ಪರೀಕ್ಷಾ ಸ್ಫೋಟ ನಡೆಯಬೇಕು. ಅದರ ಸತ್ಯಾಸತ್ಯತೆ ಜನರಿಗೆ ಗೊತ್ತಾಗಬೇಕು ಎಂದು ಬೇಬಿ ಬೆಟ್ಟದ ಕ್ರಷರ್ ಮಾಲೀಕರು ಹಾಗೂ ಕಾರ್ಮಿಕರ ಗುಂಪು ಸರ್ಕಾರ ಪರವಾಗಿ ಕೆಆರ್‌ಎಸ್ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಒಂದೆಡೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈಗಾಗಲೇ ಗಣಿ ಸ್ಫೋಟದಿಂದ ಅಣೆಕಟ್ಟೆಗೆ ಅಪಾಯವಿರುವುದನ್ನು ವೈಜ್ಞಾನಿಕವಾಗಿಯೇ ಗುರುತಿಸಿದೆ. ಹೀಗಿರುವಾಗ ಪರೀಕ್ಷಾರ್ಥ ಸ್ಫೋಟ ಅವಶ್ಯಕತೆ ಏನಿದೆ. ಇದರ ಹಿಂದೆ ಗಣಿಗಾರಿಕೆಗೆ ಮತ್ತೆ ಚಾಲನೆ ನೀಡುವ ಹುನ್ನಾರ ಅಡಗಿರುವ ಅನುಮಾನಗಳಿವೆ. ಜನರ ದಿಕ್ಕು ತಪ್ಪಿಸುವ ನಾಟಕವಾಡದೆ ಅಣೆಕಟ್ಟೆ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯಿಸಿದರು.
ಮತ್ತೂಂದೆಡೆ ಪರೀಕ್ಷಾರ್ಥ ಸ್ಫೋಟ ನಡೆಸುವುದರಲ್ಲಿ ತಪ್ಪೇನಿದೆ. ನಾವೇನು ವರದಿಯನ್ನು ಅಲ್ಲಗೆಳೆಯುತ್ತಿಲ್ಲ. ಅದರ ಸತ್ಯಾಸತ್ಯತೆಯನ್ನು ಮತ್ತೂಮ್ಮೆ ಪರಿಶೀಲಿಸಲಾಗುತ್ತಿದೆ. ಅದರಲ್ಲಿಯೂ ಅಣೆಕಟ್ಟೆಗೆ ಅಪಾಯವಿದೆ ಎಂದಾದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ ಎಂಬುದು ಕ್ರಷರ್ ಮಾಲೀಕರ ವಾದವಾಗಿತ್ತು. ಆದರೆ ಪ್ರಗತಿಪರರು ಮಾತ್ರ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ಬೇಡವೇ ಬೇಡ. ಶಾಶ್ವತ ವಾಗಿ ಗಣಿಗಾರಿಕೆ ನಿಲ್ಲಿಸಿ ಎಂದು ಪಟ್ಟು ಹಿಡಿದು ಕುಳಿತರು.
ಜಲಾಶಯಕ್ಕೆ ಅಪಾಯವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಎಷ್ಟು ಮೀಟರ್ ವರೆಗೆ ಭೂಮಿಯಲ್ಲಿ ಕಂಪನ ಆಗಲಿದೆ ಎಂಬ ಕುರಿತು ತಜ್ಞರಿಂದ ವರದಿ ಪಡೆಯಲಾಗುತ್ತಿದೆ. ಕೆಆರ್‌ಎಸ್ ಅಣೆಕಟ್ಟೆ ಸುರಕ್ಷತೆ ಸರ್ಕಾರ ಬದ್ಧವಾಗಿದೆ. ಬೇಬಿ ಬೆಟ್ಟ ಕಾವಲ್‌ನಲ್ಲಿ ಕಲ್ಲು ಗಣಿಗಾರಿಕೆ 200, 300 ವರ್ಷಗಳಿಂದ ನಡೆಯುತ್ತಿದ್ದು, ಡ್ಯಾಂ ನಿರ್ಮಾಣಕ್ಕೂ ಇಲ್ಲಿಂದಲೇ ಕಲ್ಲು ಸಾಗಿಸಲಾಗಿತ್ತು.
-ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಸಚಿವ