ಕಾರಟಗಿ: ಪಟ್ಟಣದ 5ನೇ ವಾರ್ಡ್‌ನಲ್ಲಿ ದುರಸ್ತಿಗೀಡಾದ ಕೊಳವೆಬಾವಿಯನ್ನು ಪುರಸಭೆ ಸಿಬ್ಬಂದಿ ರಿಪೇರಿ ಕಾರ್ಯ ನಡೆಸಿ ಸಮರ್ಪಕ ನೀರು ಪೂರೈಕೆಗೆ ಅನುವು ಮಾಡಿಕೊಟ್ಟಿದ್ದಾರೆ. ಕಳೆದ ಒಂದುವರೆ ತಿಂಗಳಿನಿಂದ ಕುಡಿವ ನೀರಿನ ತೊಂದರೆ ಅನುಭವಿಸಿದ್ದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಕೆಲ ದಿನಗಳ ಹಿಂದೆ ಪುರಸಭೆ ಸಿಬ್ಬಂದಿ ಕೊಳವೆಬಾವಿಯ ಮೋಟರ್ ಬಿಚ್ಚಿಕೊಂಡು ಹೋಗಿದ್ದರು. ಆದರೆ ರಿಪೇರಿ ಮಾಡದೆ ಮೋಟರ್ ಅಳವಡಿಸದೆ ನಿರ್ಲಕ್ಷ್ಯ ತೋರಿದ್ದರಿಂದ ವಾರ್ಡ್‌ನ ಮಹಿಳೆಯರು ನೀರಿನ ತೊಟ್ಟಿ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಎಚ್ಚೆತ್ತ ಪುರಸಭೆ ಸಿಬ್ಬಂದಿ ಕೂಡಲೇ ಮೋಟರ್ ರಿಪೇರಿ ಕಾರ್ಯ ನಡೆಸಿ ನೀರು ಪೂರೈಸಿದ್ದಾರೆ.
ಕೊಳವೆ ಬಾವಿಯ ಕೆಟ್ಟು ಹೋದ ಹಿನ್ನೆಲೆಯಲ್ಲಿ ನೀರಿಗಾಗಿ ನಿತ್ಯ ಕಳೆದ ಒಂದುವರೆ ತಿಂಗಳಿನಿಂದ ತೀವ್ರ ತೊಂದರೆ ಅನುಭವಿಸಿದ್ದೇವೆ. ಪುರಸಭೆ ಸಿಬ್ಬಂದಿ ಮೋಟರ್ ರಿಪೇರಿ ಮಾಡಿಸಿ ನೀರು ಪೂರೈಕೆ ಮಾಡಿದ್ದಾರೆ ಎಂದು ಶರಣಪ್ಪ ಕಾಯಿಗಡ್ಡೆ ಹೇಳಿದರು.
ವಾರ್ಡ್‌ನ ನೀರಿನ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದ ಫಲವಾಗಿ ಪುರಸಭೆ ಮೋಟರ್ ದುರಸ್ತಿ ಕಾರ್ಯ ನಡೆಸಿದ್ದಾರೆ ಎಂದು ವಾರ್ಡ್‌ನ ಮಹಿಳೆಯರಾದ ಅನಂತಮ್ಮ, ಶಿವಮ್ಮ, ಗೌರಮ್ಮ, ಗಂಗಮ್ಮ, ದ್ಯಾವಮ್ಮ, ನೀಲಮ್ಮ, ದೇವಮ್ಮ, ಅಂಜಿನಮ್ಮ, ನರಸಮ್ಮ, ಜುಗ್ಗುರಾಜ್ ರಾಠೊಡ, ಹಂಪಮ್ಮ, ಸುವರ್ಣ, ಸಕ್ಕಮ್ಮ, ಸಕ್ಕೂಬಾಯಿ, ಅಮೀದಾ ಬಾನು ತಿಳಿಸಿದರು.
ಕುಡಿಯವ ನೀರಿನ ಸಮಸ್ಯೆ ಕುರಿತು ಜು.17ರಂದು ‘ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ’ ಶೀರ್ಷಿಕೆಯಡಿ ‘ಉದಯವಾಣಿ’ ಸುದ್ದಿ ಪ್ರಕಟಿಸಿತ್ತು.