ಧಾರವಾಡ: ನಗರದ ವಿದ್ಯಾರಣ್ಯ ಕಾಲೇಜು ಬಳಿಯ ಡಾ| ಅಂಬೇಡ್ಕರ್ ಕಾಲೋನಿಯ ಸುಮಾರು 24 ಮನೆಗಳ ತೆರವು ಕ್ರಮ ಖಂಡಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮನೆಗಳಿರುವ ಜಾಗ ದೈವಜ್ಞ ಹೌಸಿಂಗ್ ಸೊಸೈಟಿಗೆ ಸೇರಿದ್ದೆಂದು ಹೇಳಲಾಗುತ್ತಿದೆ. ಅತಿಕ್ರಮಣಗೊಂಡ ಸ್ಥಳವನ್ನು ದೈವಜ್ಞ ಹೌಸಿಂಗ್ ಸೊಸೈಟಿಗೆ ನೀಡುವಂತೆ ಜು. 18ರಂದು ನ್ಯಾಯಾಲಯ ಆದೇಶ ನೀಡಿರುವುದಾಗಿ ಹೇಳಿ ಅದರ ಆದೇಶ ಪ್ರತಿ ಹಿಡಿದು ನ್ಯಾಯಾಲಯದ ಬೇಲಿಫ್‌ಗಳು ಜೆಸಿಬಿಯೊಂದಿಗೆ ಆಗಮಿಸಿದ್ದರು. ಈ ವೇಳೆ ಕಾಲೋನಿಯ 24 ಮನೆಗಳನ್ನು ತೆರವುಗೊಳಿಸಲು ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಮಾಹಿತಿ ನೀಡಿ, ತೆರವುಗೊಳಿಸಲು ಮುಂದಾದರು.
ನಾವು ಕಳೆದ 25-30 ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಏಕಾಏಕಿ ಆಗಮಿಸಿ ನೋಟಿಸ್ ನೀಡದೇ ಮನೆ ತೆರವು ಮಾಡಿದರೆ ಹೇಗೆ? ಇದರಿಂದ ನಮ್ಮ ಕುಟುಂಬಗಳು ಬೀದಿ ಪಾಲಾಗಲಿವೆ. ಯಾವುದೇ ಕಾರಣಕ್ಕೂ ಮನೆಗಳನ್ನು ತೆರವುಗೊಳಿಸಲು ಬಿಡಲ್ಲ ಎಂದು ನಿವಾಸಿಗಳು ಪ್ರತಿರೋಧ ಒಡ್ಡಿದರು.
ಆದರೆ ಇದಕ್ಕೆ ಒಪ್ಪದ ಬೇಲಿಫ್‌ಗಳು, ನ್ಯಾಯಾಲಯ ಆದೇಶ ಪಾಲನೆ ಮಾಡಬೇಕು. ಮನೆಯಲ್ಲಿನ ವಸ್ತುಗಳನ್ನು ತೆರವುಗೊಳಿಸಲು ಒಂದು ಗಂಟೆ ಅವಕಾಶ ನೀಡಲಾಗುವುದು. ನಂತರ ನಾವು ತೆರವು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಕೋರ್ಟ್ ಬೇಲಿಫ್‌ಗಳು ಹಾಗೂ ನಿವಾಸಿಗಳ ಮಧ್ಯೆ ಕೆಲ ಹೊತ್ತು ಮಾತಿನ ಚಕಮಕಿ ಉಂಟಾಯಿತು. ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಕಾರ್ಯಾಚರಣೆಗೆ ಮುಂದಾಗಬೇಡಿ. ಇದರಿಂದ ಅನಾಹುತ ನಡೆಯುವ ಸಂಭವವಿದ್ದು, ಮೊದಲು ನಮಗೆ ಮಾಹಿತಿ ಕೊಡಿ. ನಮ್ಮ ಸಮ್ಮುಖದಲ್ಲಿ ಕಾರ್ಯಾಚರಣೆ ಆರಂಭಿಸುವಂತೆ ಪೊಲೀಸರು ನ್ಯಾಯಾಲಯದ ಬೇಲಿಫ್‌ಗಳಿಗೆ ಸಲಹೆ ನೀಡಿದರು. ಇದಕ್ಕೆ ಸಮ್ಮತಿಸಿದ ಬೇಲೀಫಗಳು, ಕಾರ್ಯಾಚರಣೆ ಮುಂದೂಡಿದರು. ತೆರವು ಕಾರ್ಯಾಚರಣೆಗೆ ಪೊಲೀಸರ ಭದ್ರತೆ ಒದಗಿಸುವ ಕುರಿತು ಜು. 24ರಂದು ಆದೇಶ ನೀಡಲಿದ್ದು, ಅಷ್ಟರೊಳಗೆ ನಿವಾಸಿಗಳು ಸ್ಥಳಾಂತರ ಆಗಬೇಕು ಎಂದು ಬೇಲಿಫ್‌ಗಳು ಎಚ್ಚರಿಕೆ ನೀಡಿ ತೆರಳಿದರು.