ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ ಮುಂದುವರಿದ ಯೋಜನೆಯಾಗಿದೆ. ಆದ್ದರಿಂದ ಯೋಜನಾ ನಿರಾಶ್ರಿತರಿಗೆ ನೀಡುವ ಮೀಸಲಾತಿಯನ್ನು ಯೋಜನೆಯಿಂದ ಈ ಹಿಂದೆಯೇ ನಿರಾಶ್ರಿತರಾದವರಿಗೂ ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶಸಿಂಗ್ ಅವರಿಗೆ ಸಂತ್ರಸ್ತರು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು.
ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯ ನಿರ್ಮಾಣಕ್ಕಾಗಿ ಮನೆ, ಭೂಮಿ ಎಲ್ಲವನ್ನು ತ್ಯಾಗ ಮಾಡಿದ ಸಂತ್ರಸ್ತರಿಗೆ 1980ರಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಅತಿ ಕಡಿಮೆ ಪರಿಹಾರ ನೀಡಲಾಗಿದೆ. ಆಗ ಸಂತ್ರಸ್ತರಿಗೆ ಹೋರಾಟದ ಭಾವನೆಯಾಗಲಿ, ನ್ಯಾಯಾಲಯಕ್ಕೆ ಹೋಗಿ ಹೆಚ್ಚಿನ ಪರಿಹಾರ ಪಡೆಯುವ ಬಗ್ಗೆಯಾಗಲಿ ಯಾವುದೇ ಮಾಹಿತಿಯೂ ಇರಲಿಲ್ಲ. ಪರಿಹಾರ 1980ರಲ್ಲಿ ನೀಡಿದರೂ ನೀರು ನಿಲ್ಲಿಸಿ, ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಿದ್ದು 1999-2000 ಸಾಲಿನಲ್ಲಿ. 2000ನೇ ಸಾಲಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಬಾಧಿತಗೊಂಡ ನಿರಾಶ್ರಿತರ ಒತ್ತಾಯದ ಮೇರೆಗೆ ಸರ್ಕಾರ ನಿರಾಶ್ರಿತರಿಗೆ ನೇಮಕಾತಿ ಹಾಗೂ ಶಿಕ್ಷಣದಲ್ಲಿ ಶೇ 5ರಷ್ಟು ಒಳಮೀಸಲಾತಿ ಒದಗಿಸಿದೆ. ಅದು 2000ರಲ್ಲಿ ಜಾರಿಗೆ ಬಂತು. ಸ್ವಾಧೀನ ಮಾಡಿಕೊಂಡ 20 ವರ್ಷದೊಳಗಿನ ಸಂತ್ರಸ್ತರಿಗೆ ಮಾತ್ರ ಈ ಮೀಸಲಾತಿ ಅನ್ವಯ ಎಂಬ ಷರತ್ತು ವಿಧಿಸಲಾಯಿತು. ಅದು 2020ರ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ.
ಇದರಿಂದ ಆಲಮಟ್ಟಿ ಸುತ್ತಮುತ್ತಲಿನ ಹಲವಾರು ಗ್ರಾಮಗಳ ನಿರಾಶ್ರಿತರಿಗೆ ಈ ಷರತ್ತು ತೊಂದರೆಯಾಗಿದೆ. ಇವರಿಗೆಲ್ಲ ಭೂಸ್ವಾಧೀನದ ಅವಾರ್ಡ್ ಆಗಿದ್ದು 1980ರಲ್ಲಿ. ಆದರೆ ಸ್ಥಳಾಂತರಗೊಂಡಿದ್ದು 1999ರಲ್ಲಿ. ಹೀಗಾಗಿ ಬಹುತೇಕ ನೈಜ ಸಂತ್ರಸ್ತ ಮಕ್ಕಳು ಈ ಮೀಸಲಾತಿ ಸೌಲಭ್ಯದಿಂದ ವಂಚಿತಗೊಂಡಿದ್ದಾರೆ. 2020ರ ವರೆಗಿರುವ ಸೌಲಭ್ಯವನ್ನು 2050ರ ವರೆಗೆ ಮುಂದುವರಿಸಬೇಕು ಎಂದು ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆ ಸದಸ್ಯರು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ರಾಕೇಶ್‌ಸಿಂಗ್, ಸಂತ್ರಸ್ತರಿಗೆ ಮೀಸಲಾತಿ ಬಗ್ಗೆ ಪ್ರಸ್ತಾವನೆ ನಮ್ಮ ಹಂತದಲ್ಲಿದೆ. ಎರಡು ದಿನದೊಳಗೆ ಅಂತಿಮ ನಿರ್ಣಯ ಕೈಗೊಂಡು 2050ರ ವರೆಗೆ ಮುಂದುವರಿಸುವ ಪ್ರಸ್ತಾವನೆಯನ್ನು ಸರ್ಕಾರದ ಡಿಪಿಎಆರ್‌ಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಕರುನಾಡು ಗಾಂಧಿ ಉತ್ಸವ: ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಅವರ ಜನ್ಮದಿನವನ್ನು ಫೆ.18ರಂದು ಆಲಮಟ್ಟಿಯಲ್ಲಿ ಆಚರಿಸಲಾಗುತ್ತಿದೆ. ಅದಕ್ಕೆ ಅತಿಥಿಗಳಾಗಿ ಪಾಲ್ಗೊಳ್ಳಬೇಕು ಎಂದು ಕರುನಾಡು ಗಾಂಧಿ ಉತ್ಸವ ಸಮಿತಿಯವರು ರಾಕೇಶ್‌ಸಿಂಗ್ ಅವರಿಗೆ ಆಮಂತ್ರಣ ನೀಡಿದರು. ಐದು ಲಕ್ಷ ರೂ. ಮೊತ್ತದೊಳಗಿನ ಯಾವುದೇ ಕಾಮಗಾರಿಗಳನ್ನು ಮ್ಯಾನುವಲ್ ಟೆಂಡರ್ ಪದ್ಧತಿಯಲ್ಲಿ ಕರೆಯಬೇಕು. 50 ಲಕ್ಷ ರೂ.ಗಳ ಮೊತ್ತದೊಳಗಿನ ಕೆಬಿಜೆಎನ್‌ಎಲ್ ಕಾಮಗಾರಿ ಟೆಂಡರ್‌ನಲ್ಲಿ ಯೋಜನೆಯಿಂದ ಬಾಧಿಗೊಂಡಿರುವ ಜಿಲ್ಲೆಗಳಿಗೆ ಮೀಸಲಾತಿ ನೀಡಬೇಕು ಎಂದು ವಿವಿಧ ಗುತ್ತಿಗೆದಾರರು ಮನವಿ ಮಾಡಿದರು. ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ, ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಎಸ್.ಎಂ. ಜೋಶಿ, ಗುತ್ತಿಗೆದಾರ ಸಂಘದ ಅಧ್ಯಕ್ಷ ವೀರೇಶಕುಮಾರ ಹೆಬ್ಟಾಳ, ಗೌರವಾಧ್ಯಕ್ಷ ಜಿ.ಸಿ. ಮುತ್ತಲದಿನ್ನಿ, ವೈ.ಎಚ್. ನಾಗಣಿ, ಕೆ.ವಿ.ಶಿವಕುಮಾರ, ಟಿ.ಎಸ್. ಅಫಜಲಪುರ, ಗಿರೀಶ ಮರೋಳ, ಜಕ್ಕಪ್ಪ ಮಾಗಿ, ಯಲ್ಲಪ್ಪ ಜಟ್ಟಗಿ, ಬಸವರಾಜ ದಂಡಿನ, ಗೋಪಾಲ ಬಂಡಿವಡ್ಡರ, ರಮೇಶ ಪಟ್ಟಣಶೆಟ್ಟಿ, ಶಿವು ಅಂಗಡಿ ಇದ್ದರು.