ಚಿತ್ರದುರ್ಗ: ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀ ನಾಮೆ ನೀಡುವುದಾಗಿ ನಗರಸಭೆ, ತಾ. ಪಂ. ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಭಾನುವಾರ ನಗರಸಭೆ, ತಾಪಂ, ಗ್ರಾಪಂ ಸದಸ್ಯ ರು ತಿಪ್ಪಾರೆಡ್ಡಿ ಅವರ ಭಾವಚಿತ್ರ ಹಿಡಿದು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ನಂತರ ಪತ್ರಿ ಕಾಗೋಷ್ಠಿ ನಡೆಸಿ ಈ ನಿರ್ಧಾರ ಪ್ರಕಟಿಸಿದರು.
ಚಿತ್ರದುರ್ಗ ಕ್ಷೇತ್ರದಿಂದ ಐದು ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ತಿಪ್ಪಾರೆಡ್ಡಿ ಅವರು ಅಪಾರ ಅನುಭವಿಯಾಗಿದ್ದು, ಪಕ್ಷ ಹಾಗೂ ಕ್ಷೇತ್ರಕ್ಕಾಗಿ ದುಡಿದಿದ್ದಾರೆ. 72ರ ಇಳಿವಯಸ್ಸಿನಲ್ಲಿರುವ ಅವರಿಗೆ ಈಗ ಮಂತ್ರಿ ಸ್ಥಾನ ಕೊಡದೆ ಮತ್ಯಾವಾಗ ಕೊಡುತ್ತೀರಿ ಎಂದು ಪಕ್ಷದ ವರಿಷ್ಠರನ್ನು ಪ್ರಶ್ನಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓರ್ವ ಜಿಪಂ ಸದಸ್ಯರು, ಆರು ತಾಪಂ ಸದಸ್ಯರು, ತಾಪಂ ಉಪಾಧ್ಯಕ್ಷರು, ನಗರಸಭೆಯ 17 ಸದಸ್ಯರು, ಸುಮಾರು 100 ಮಂದಿ ಗ್ರಾಪಂ ಸದಸ್ಯರು ಹಾಗೂ 18 ಮಂದಿ ಗ್ರಾಪಂ ಅಧ್ಯಕ್ಷರು ಸೋಮವಾರ (ಫೆ.6) ತನಕ ಕಾದು ನೋಡಿ ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಹೊರಗಿನಿಂದ ಬಂದವರು ಕಾರಣ. ಅವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಹಿರಿತನ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಿರುವ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು.
-ಶ್ರೀನಿವಾಸ್, ನಗರಸಭೆ ಸದಸ್ಯ