ನವದೆಹಲಿ/ಬೆಂಗಳೂರು: ದೇಶಾದ್ಯಂತ ಹೀನಾಯ ಪ್ರದರ್ಶನ ನೀಡಿರುವ ಕಾಂಗ್ರೆಸ್‌ನಲ್ಲೀಗ ರಾಜೀನಾಮೆ ಪರ್ವ ಆರಂಭವಾಗಿದೆ. ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಪದತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಗುರುವಾರವೇ ರಾಹುಲ್, ಸೋನಿಯಾ ಗಾಂಧಿ ಬಳಿ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ಅವರು ಎರಡು ದಿನ ಕಾದು ನೋಡುವಂತೆ ಹೇಳಿದ್ದರು. ಹೀಗಾಗಿ ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಇದರಲ್ಲಿ ರಾಹುಲ್ ರಾಜೀನಾಮೆ ಪ್ರಸ್ತಾಪ ಮಾಡಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸುಮಾರು 18 ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಫಲಿತಾಂಶ ನೀಡಿದ್ದು, ಪಕ್ಷದ ಅಗ್ರ ನಾಯಕರೇ ಸೋತಿದ್ದಾರೆ. ಇದಷ್ಟೇ ಅಲ್ಲ, ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿದ್ದ ಅಮೇಠಿಯಲ್ಲೇ ರಾಹುಲ್ ಗಾಂಧಿ ಸೋತಿರುವುದು ಪಕ್ಷಕ್ಕೆ ಭಾರೀ ಮುಜುಗರವನ್ನೂ ತಂದಿದೆ. ಅಲ್ಲದೆ, ಈಗಾಗಲೇ ಉತ್ತರ ಪ್ರದೇಶದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ರಾಜೀನಾಮೆ ಜತೆಗೆ, ಅಮೇಠಿಯ ಎಲ್ಲಾ ಕೈ ಪದಾಧಿಕಾರಿಗಳು ಪದತ್ಯಾಗ ಮಾಡಿದ್ದಾರೆ.
ಕೆಪಿಸಿಸಿ ಪುನಾರಚನೆ: ಇತ್ತ ಕರ್ನಾಟಕದಲ್ಲೂ ರಾಜೀನಾಮೆ ಪರ್ವ ಮುಂದುವರಿದಿದೆ. ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಬೆನ್ನಲ್ಲೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ. ಪಾಟೀಲ ರಾಜೀನಾಮೆ ಸಲ್ಲಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದೇನೆ. ಎಐಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಪ್ರಚಾರ ಸಮಿತಿ ಅಧ್ಯಕ್ಷರ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹಾಗೂ ನನ್ನ ಶಕ್ತಿ ಮೀರಿ ನಿಭಾಯಿಸಿದ್ದೇನೆ. ನನ್ನ ಅಧಿಕಾರ ವ್ಯಾಪ್ತಿಯೊಳಗೆ ಪಕ್ಷದ ಸಂಘಟನೆ, ಚುನಾವಣೆ ಚಟುವಟಿಕೆಗಳನ್ನು ನೋಡಿಕೊಂಡಿದ್ದೇನೆ. ಈ ಹೊಣೆಗಾರಿಕೆ ನೀಡಿದ ಪಕ್ಷದ ಮುಖಂಡರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು. ಎಚ್.ಕೆ. ಪಾಟೀಲ್ ಬೆನ್ನ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ರಾಜೀನಾಮೆ ನೀಡುವ ಮುನ್ಸೂಚನೆ ನೀಡಿದ್ದಾರೆ. ಈ ಕುರಿತು ಶುಕ್ರವಾರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ನಡೆದ ಸಚಿವರ ಸಭೆಯಲ್ಲಿ ದಿನೇಶ್ ಗುಂಡೂರಾವ್ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದ್ದು, ಶನಿವಾರ ಅಧಿಕೃತವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಸಂಘಟನೆಯಲ್ಲಿಯೂ ಬದಲಾವಣೆ: ಲೋಕಸಭೆ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದ ಸಂಘಟನೆಯಲ್ಲಿಯೂ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷದ ಉಸ್ತುವಾರಿಗಳು, ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿ ಕಾರ್ಯದರ್ಶಿಗಳನ್ನು ಬದಲಾವಣೆ ಮಾಡಬೇಕೆಂಬ ಬೇಡಿಕೆ ರಾಷ್ಟಮಟ್ಟದಲ್ಲಿ ಕೇಳಿ ಬರುತ್ತಿದ್ದು, ರಾಜ್ಯ ಮಟ್ಟದಲ್ಲಿಯೂ ವಿಜಿಟಿಂಗ್ ಕಾರ್ಡ್ ಪದಾಧಿಕಾರಿಗಳನ್ನು ಕಿತ್ತು ಹಾಕಿ ಸಕ್ರಿಯವಾಗಿ ಕೆಲಸ ಮಾಡುವ ಪದಾಧಿಕಾರಿಗಳಿಗೆ ಅವಕಾಶ ನೀಡುವಂತೆ ಪಕ್ಷದ ವಲಯದಲ್ಲಿ ಒತ್ತಾಯ ಕೇಳಿ ಬರುತ್ತಿದೆ ಎಂದು ತಿಳಿದು ಬಂದಿದೆ.
ಆಪರೇಷನ್ ತಡೆಗೆ ಜಂಟಿ ಪ್ರಯತ್ನ: ಮೈತ್ರಿ ಪಕ್ಷಗಳ ನಾಯಕರ ಜೊತೆ ಮುನಿಸಿಕೊಂಡು ಬಂಡಾಯ ಎದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಅತೃಪ್ತ ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳಲು ಎರಡೂ ಪಕ್ಷಗಳ ನಾಯಕರು ಪ್ರಯತ್ನ ನಡೆಸಲು ತೀರ್ಮಾನಿಸಿದ್ದಾರೆ. ಅವರ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸುವ ಮೂಲಕ ಅವರನ್ನು ಮೈತ್ರಿಯಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕನಿಷ್ಠ ಹತ್ತು ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಮೈತ್ರಿ ಸರ್ಕಾರಕ್ಕೆ ಸಂಖ್ಯಾ ಬಲದ ಸಮಸ್ಯೆ ಉಂಟಾಗುತ್ತದೆ. ಅಷ್ಟೊಂದು ಸಂಖ್ಯೆಯ ಶಾಸಕರು ರಾಜೀನಾಮೆ ನೀಡದಂತೆ ಎಚ್ಚರ ವಹಿಸಿಲು ಎರಡೂ ಪಕ್ಷಗಳ ನಾಯಕರು ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ, ಅತೃಪ್ತರು ರಾಜೀನಾಮೆಗೆ ಮುಂದಾದರೆ, ಅವರಿಗೆ ಸಚಿವ ಸ್ಥಾನ ನೀಡುವ ಮೂಲಕವಾದರೂ ಸರ್ಕಾರದಲ್ಲಿ ಉಳಿಸಿಕೊಳ್ಳುವ ಯತ್ನ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಮೌನ ಮುರಿಯದ ಸಿಎಂ ಕುಮಾರಸ್ವಾಮಿ
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಸುದ್ದಿ ಮಾಡಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಮುನಿಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರೂ, ಮಾಧ್ಯಮಗಳಿಗೆ ಮಾತನಾಡದೇ ಮೌನ ಮುಂದುವರೆಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಸಿದರು. ಮಾಧ್ಯಮ ಪ್ರತಿನಿಧಿಗಳು ಮಾತನಾಡುವಂತೆ ಮನವಿ ಮಾಡಿದರೂ, ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗಿ ನೋಡದೇ ಹೋದರು.
ರಾಜೀನಾಮೆಗೆ ಮುಂದಾದ ಪ್ರಜ್ವಲ್
ತುಮಕೂರಿನಲ್ಲಿನ ಮಾಜಿ ಪ್ರಧಾನಿ ದೇವೇಗೌಡರು ಸೋತಿರುವುದರಿಂದಾಗಿ, ಹಾಸನದಲ್ಲಿ ಗೆದ್ದಿರುವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಿ ಕ್ಷೇತ್ರವನ್ನು ತಮ್ಮ ತಾತನಿಗೆ ಬಿಟ್ಟುಗೊಡಲು ಮುಂದಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಹಾಸನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ತುಮಕೂರಿನಲ್ಲಿ ದೇವೇಗೌಡರು ಸೋಲು ಅನುಭವಿಸಿರುವುದರಿಂದ ಅವರನ್ನು ಸಂಸತ್‌ಗೆ ಕಳುಹಿಸುವ ಸಲುವಾಗಿ ರಾಜೀನಾಮೆ ನೀಡಿ ಹಾಸನ ಕ್ಷೇತ್ರವನ್ನು ತೆರವು ಮಾಡಲು ನಿರ್ಧರಿಸಿದ್ದೇನೆ ಎಂದರು. ಗುರುವಾರ ರಾತ್ರಿಯಿಡೀ ಚಿಂತಿಸಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಈ ನಿರ್ಧಾರದ ಬಗ್ಗೆ ಹಾಸನ ಜಿಲ್ಲೆಯ ಜನರು ತಪ್ಪು ತಿಳಿಯಬಾರದು. ದೇವೇಗೌಡರು ನನಗೆ ದೇವರ ಸಮಾನ ಎಂದು ಹೇಳಿದರು.