Advertisement

ಶಾಸಕರಿಂದಲೇ ರಾಜೀನಾಮೆ ಬೆದರಿಕೆ

06:00 AM Sep 26, 2018 | Team Udayavani |

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರಿಗೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಸರಕಾರದಲ್ಲಿ ನಮ್ಮ ಹಿತ ಕಾಯದಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತೇವೆ ಎಂದು ಶಾಸಕರೂ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಾಸಕರು ಯಾವುದೇ ನಿಯಂತ್ರಣ ಇಲ್ಲದಂತೆ ನಡೆದು ಕೊಳ್ಳುತ್ತಿರುವುದು ಪಕ್ಷದ ಶಿಸ್ತು ಹಾಗೂ ಸರಕಾರದ ಕಾರ್ಯ ವೈಖರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪಕ್ಷ ವಿರೋಧಿ ಚಟುವಟಿಕೆಯನ್ನು ಹೈಕ‌ಮಾಂಡ್‌ ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಶಾಸಕರು ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು, ಮಾಧ್ಯಮಗಳಿಗೆ ನೇರವಾಗಿ ಹೇಳಿಕೆ ನೀಡುವು ದನ್ನು ಪಕ್ಷ ಗಂಭೀರವಾಗಿ ಪರಿಗಣಿಸಲಿದೆ ಎಂದು ಎಚ್ಚರಿಕೆ ನೀಡಿದರು. ಆಗ ಕೆಲವು ಶಾಸಕರು, ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌ ಶಾಸಕರಿಗೆ ಮನ್ನಣೆ ದೊರೆಯುತ್ತಿಲ್ಲ.

ಅಧಿಕಾರಿಗಳ ವರ್ಗಾವಣೆ ವಿಷಯದಲ್ಲೂ ಜೆಡಿಎಸ್‌ನಿಂದ ಸೋತ ಅಭ್ಯರ್ಥಿಗಳ ಮಾತಿಗೆ ಹೆಚ್ಚಿನ ಬಲ ಸಿಗುತ್ತಿದೆ. ನಮ್ಮದೇ ಸರಕಾರ ಇದ್ದರೂ ನಮ್ಮ ಹಿತ ಕಾಯುವವರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸಮಾಧಾನ ಶಾಸಕರನ್ನು ಸಮಾಧಾನಿಸಿದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆಶಯದಂತೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದೆ. ಈ ಸರಕಾರ ಐದು ವರ್ಷ ಅವಧಿ ಪೂರೈಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರೂ ಹೊಂದಿಕೊಂಡು ಹೋಗಬೇಕು. ಶಾಸಕರಿಗೆ ಏನೇ ಸಮಸ್ಯೆ ಯಾದರೂ ಪಕ್ಷದ ನಾಯಕರ ಗಮನಕ್ಕೆ ತರಬೇಕು. ಸರಕಾರದ ಮಟ್ಟದಲ್ಲಿ ಯಾವುದೇ ಕೆಲಸಗಳು ಆಗದಿದ್ದರೂ ನಮ್ಮ ಗಮನಕ್ಕೆ ತಂದರೆ, ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಕೆಲವು ಶಾಸಕರು ಬಹಿರಂಗವಾಗಿ ಸರಕಾರದ ವಿರುದ್ಧ ಹೇಳಿಕೆ ನೀಡುತ್ತಿರುವುದರಿಂದ ಸರಕಾರ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅಂತಹ ಶಾಸಕರಿಗೆ ಕಡಿವಾಣ ಹಾಕಿ ಎಂದು ಕೆಲವು ಶಾಸಕರು ಸಭೆಯಲ್ಲಿ ಆಗ್ರಹಿಸಿದ್ದಾರೆ. ಈ ಶಾಸಕರ ಒತ್ತಾಯ ಹೆಚ್ಚಾದಂತೆ ಸಿದ್ದರಾಮಯ್ಯ ಸಮ್ಮಿಶ್ರ ಸರಕಾರದಲ್ಲಿ ಎಲ್ಲರನ್ನೂ ಮಂತ್ರಿ ಮಾಡಲು ಆಗುವುದಿಲ್ಲ. ಹೈಕಮಾಂಡ್‌ ಯಾರಿಗೆ ಅವಕಾಶ ನೀಡುತ್ತದೋ ಅವರು ಮಂತ್ರಿಯಾಗುತ್ತಾರೆ ಎಂದು ಸಮಾಧಾನಿಸಿದರು.

ಲೋಕಸಭೆಗೆ ಒಗ್ಗಟ್ಟು ಪ್ರದರ್ಶನ
ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆ ಗೆಲ್ಲುವುದು ಅತ್ಯಂತ ಅನಿವಾರ್ಯವಿದೆ. ಹೈಕಮಾಂಡ್‌ ಕರ್ನಾಟಕದ ಮೇಲೆ ಹೆಚ್ಚಿನ ನಿರೀಕ್ಷೆಯನ್ನೂ ಇಟ್ಟುಕೊಂಡಿದೆ. ಹೀಗಾಗಿ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.

Advertisement

ಶಾಸಕರ ಅಸಮಾಧಾನ
ಬೆಂಗಳೂರಿನಲ್ಲಿ ಒಂದು ಮಳೆ ಬಂದರೆ ಎಷ್ಟು ಕಷ್ಟ ಇದೆ ಎಂಬುದು ನಮಗೆ ಮಾತ್ರ ಗೊತ್ತು ಎಂದು ನಗರ ಶಾಸಕರು ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಗಣೇಶನ ಹಬ್ಬದ ಗಲಾಟೆಯಲ್ಲಿಯೂ ಮುಖ್ಯ ಮಂತ್ರಿಯೇ ನೇರವಾಗಿ ಎಸ್ಪಿ- ಡಿಜಿಗೆ ಕರೆ ಮಾಡಿ ಜೆಡಿಎಸ್‌ನವರಿಗೆ ಸಹಾಯ ಮಾಡುತ್ತಾರೆ. ಹೀಗಾದರೆ ನಾವೇನು ಮಾಡಬೇಕು ಎಂದು ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ ಪ್ರಶ್ನಿಸಿದರು ಎಂದು ಹೇಳಲಾಗಿದೆ.  ಅದೇ ರೀತಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಕ್ಷೇತ್ರದ ಕೆಲಸದ ಕುರಿತು ಸಿಎಂ ಬಳಿ ಹೋದರೆ, 2 ಗಂಟೆ ಕಾಯಿಸುತ್ತಾರೆ. ನಮ್ಮ ಬೆಂಬಲ ಇಲ್ಲದೇ ಅವರು ಸಿಎಂ ಆಗಿದ್ದಾರಾ ? ನಮ್ಮ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು ? ಇಂತಹ ಸರಕಾರ ನಮಗೆ ಬೇಕಾ ? ಶಾಸಕ ನಾಗಿ ಕ್ಷೇತ್ರದ ಜನರ ಕೆಲಸ ಮಾಡಲು ಆಗದಿದ್ದರೆ, ರಾಜೀನಾಮೆ ಕೊಟ್ಟು ಹೋಗುವುದೇ ಉತ್ತಮ ಎಂದು ಖಾರವಾಗಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next