Advertisement

ಬ್ರಿಟನ್‌ನಲ್ಲಿ ಹಲವು ಸಚಿವರ ರಾಜೀನಾಮೆ: ಸಂಪುಟ ಪುನಾರಚನೆಗೆ ಕೈಹಾಕಿದ ಸುನಕ್‌

10:07 PM Oct 25, 2022 | Team Udayavani |

ಲಂಡನ್‌: “ಈ ಕ್ಷಣದಿಂದಲೇ ಪ್ರಧಾನಿಯಾಗಿ ನನ್ನ ಕೆಲಸ ಆರಂಭವಾಗುತ್ತದೆ’ ಎಂದು ಚೊಚ್ಚಲ ಭಾಷಣದಲ್ಲಿ ಬ್ರಿಟನ್‌ ಪಿಎಂ ರಿಷಿ ಸುನಕ್‌ ಘೋಷಿಸಿದ ಬೆನ್ನಲ್ಲೇ ಹೊಸ ಸಂಪುಟ ರಚನೆಯ ಪ್ರಕ್ರಿಯೆ ಆರಂಭಿಸಿದ್ದಾರೆ.

Advertisement

ಮಾಜಿ ಪ್ರಧಾನಿ ಲಿಜ್‌ ಟ್ರಸ್‌ ಸಂಪುಟದಲ್ಲಿದ್ದ ಹಲವು ಸಚಿವರಿಗೆ ಕೂಡಲೇ ರಾಜೀನಾಮೆ ನೀಡುವಂತೆ ಸುನಕ್‌ ಸೂಚಿಸಿದ್ದಾರೆ. ಅದರಂತೆ, ವಾಣಿಜ್ಯ, ಕಾನೂನು, ಅಭಿವೃದ್ಧಿ, ಶಿಕ್ಷಣ ಮತ್ತು ಪರಿಸರ ಸಚಿವರು ಪದತ್ಯಾಗ ಮಾಡಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ವಿವಾದಿತ ಮಿನಿ ಬಜೆಟ್‌ನಿಂದ ಲಿಜ್‌ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್‌ ಅವರ ಬದಲಿಗೆ ನಿಯೋಜಿತರಾದ ನೂತನ ವಿತ್ತ ಸಚಿವ ಜೆರೆಮಿ ಹಂಟ್‌ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಲಾಗಿದೆ.

ವಿಶ್ವ ನಾಯಕರಿಂದ ಅಭಿನಂದನೆ
ಮಂಗಳವಾರ ನೂತನ ಪ್ರಧಾನಿಯಾಗಿ ಪದಗ್ರಹಣ ಮಾಡಿದ ರಿಷಿ ಸುನಕ್‌ ಅವರಿಗೆ ಅಮೆರಿಕ ಅಧ್ಯಕ್ಷ ಬೈಡೆನ್‌, ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ, ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಸೇರಿದಂತೆ ಹಲವು ವಿಶ್ವನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಅವರೂ ಸುನಕ್‌ರಿಗೆ ಶುಭ ಕೋರಿದ್ದಾರೆ.

ಸಂಭ್ರಮಿಸಿದ ದೇಗುಲದ ಅಧಿಕಾರಿ
“ಬರಾಕ್‌ ಒಬಾಮ ಅಮೆರಿಕ ಅಧ್ಯಕ್ಷರಾದಾಗ ಜನ ಹೇಗೆ ಸಂಭ್ರಮಿಸಿದರೋ, ಅಷ್ಟೇ ಖುಷಿ ನಮಗೆ ಈಗ ಆಗಿದೆ’. ಹೀಗೆಂದು ಹೇಳಿದ್ದು ಭಾರತೀಯ ಮೂಲದ ಸುನಕ್‌ ಅವರ ಅಜ್ಜ ರಾಮ್‌ದಾಸ್‌ ಸುನಕ್‌ ಅವರು ಲಂಡನ್‌ನಲ್ಲಿ ನಿರ್ಮಿಸಿರುವ ಹಿಂದೂ ದೇಗುಲದ ಅಧಿಕಾರಿ ಸಂಜಯ್‌ ಚಂದಾರಣ. ರಿಷಿ ಅವರು ಪ್ರಧಾನಿಯಾದ ಸುದ್ದಿ ಕೇಳಿ ನಮಗೆಲ್ಲ ಬಹಳ ಖುಷಿಯಾಗಿದೆ ಎಂದ ಅವರು, ಹ್ಯಾಂಪ್‌ಶೈರ್‌ ನಗರದಲ್ಲಿರುವ ಈ ದೇವಾಲಯಕ್ಕೆ ಸುನಕ್‌ ಆಗಾಗ್ಗೆ ಬರುತ್ತಿರುತ್ತಾರೆ ಎಂದಿದ್ದಾರೆ.

ಇಬ್ಬರು ಕಿರಿಯ ಪ್ರಧಾನಿಗಳಿಗೆ ಭಾರತದ ನಂಟು!
ಬ್ರಿಟನ್‌ನ ಅತಿ ಕಿರಿಯ ಪ್ರಧಾನಿಗಳಲ್ಲಿ ರಿಷಿ ಸುನಕ್‌(42) ಒಬ್ಬರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. 190 ವರ್ಷಗಳ ಮೊದಲು 1812ರಲ್ಲಿ ತಮ್ಮ 42ನೇ ವಯಸ್ಸಿನಲ್ಲಿ ರಾಬರ್ಟ್‌ ಜೆಂಕಿನ್ಸನ್‌ ಬ್ರಿಟನ್‌ ಪ್ರಧಾನಿಯಾಗಿದ್ದರು. ಕಾಕತಾಳೀಯವಾಗಿ ಬ್ರಿಟನ್‌ನ ಇಬ್ಬರು ಕಿರಿಯ ಪ್ರಧಾನಿಗಳಿಗೆ ಭಾರತದ ನಂಟಿದೆ. ಸುನಕ್‌ ಅವರ ತಂದೆ-ತಾಯಿ ಪಂಜಾಬ್‌ನವರು. ಅಲ್ಲದೇ ಅವರ ಮಡದಿ, ಅತ್ತೆ-ಮಾವ ಕರ್ನಾಟಕದವರು. ಇನ್ನು, ರಾಬರ್ಟ್‌ ಜೆಂಕಿನ್ಸನ್‌ ಅವರ ತಾಯಿಯ ಅಜ್ಜಿ ಇಸಾಬೆಲ್ಲಾ ಬೀಜರ್‌ ಕೋಲ್ಕತಾದಲ್ಲಿ ಜನಿಸಿದವರು. ಅವರ ಕುಟುಂಬ ಪೋರ್ಚುಗೀಸ್‌ ವಸಾಹತುದಾರರಾಗಿ ಭಾರತದಲ್ಲಿ ನೆಲೆಸಿದ್ದವರು. ನಂತರ ಬ್ರಿಟನ್‌ಗೆ ಬಂದವರು.

Advertisement

“ಬ್ರಿಟನ್‌ಗೆ ಭಾರತದ ಹೊಸ ವೈಸರಾಯ್‌’
ಬ್ರಿಟನ್‌ ನೂತನ ಪ್ರಧಾನಿ ಭಾರತೀಯ ಮೂಲದ ರಿಷಿ ಸುನಕ್‌ ಅವರನ್ನು ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅಭಿನಂದಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಬಿಗ್‌ ಬಿ, “ಜೈ ಭಾರತ್‌..ಇದೀಗ ಬ್ರಿಟನ್‌ ಅಂತಿಮವಾಗಿ ನಮ್ಮ ತಾಯ್ನಾಡಿನಿಂದ ಅದರ ಪ್ರಧಾನಿಯಾಗಿ ಹೊಸ ವೈಸರಾಯ್‌ ಅನ್ನು ಹೊಂದಿದೆ,’ ಎಂದು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next