Advertisement

ಸರ್ಕಾರ ನಡೆಸಲಾಗದಿದ್ದರೆ ರಾಜೀನಾಮೆ ನೀಡಿ: ಬಿಎಸ್‌ವೈ

06:36 AM Jun 22, 2019 | Lakshmi GovindaRaj |

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ಶಕ್ತಿ ಇದ್ದರೆ ಸರ್ಕಾರ ನಡೆಸಲಿ. ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಹೊರ ಬರಲಿ. ಸ್ಥಿರ ಹಾಗೂ ಜನಪರ ಸರ್ಕಾರವನ್ನು ನಾವು ರಚಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಯಡಿಯೂರಪ್ಪ, ದೇವೇಗೌಡರು ಮಧ್ಯಂತರ ಚುನಾವಣೆ ನಿಶ್ಚಿತ ಎಂದು ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

“ನಿಮಗೆ ಶಕ್ತಿ ಇದ್ದರೆ ಸರ್ಕಾರ ನಡೆಸಿ. ಒಂದೊಮ್ಮೆ ನಿಮಗೆ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಹೊರ ಬನ್ನಿ. ನಾವು ಸ್ಥಿರ, ಜನಪರ ಸರ್ಕಾರ ರಚಿಸುತ್ತೇವೆ. ವಿಧಾನಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ 105 ಶಾಸಕ ಬಲ ಹೊಂದಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ’ ಎಂದು ಖಡಕ್‌ ಹೇಳಿಕೆ ನೀಡಿದ್ದಾರೆ.

ರಾಜ್ಯದ ಜನ ಸಮ್ಮಿಶ್ರ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದಾರೆ. ಸರ್ಕಾರ ಎಲ್ಲ ಹಂತದಲ್ಲೂ ವಿಫ‌ಲವಾಗಿದೆ. 13 ತಿಂಗಳಿನಿಂದ ಜನರಿಗೆ ಸಾಲಮನ್ನಾ ಸೇರಿ ಹಲವು ಭರವಸೆ ನೀಡುತ್ತಲೇ ಬಂದಿದ್ದರೂ ಯಾವುದೂ ಈಡೇರಿಲ್ಲ. ರಾಜ್ಯದ ಜನತೆ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಇದೇ ಕಾರಣಕ್ಕಾಗಿ ರಾಜ್ಯದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಜನರ ಭಾವನೆ ಅರ್ಥ ಮಾಡಿಕೊಂಡು ರಾಜೀನಾಮೆ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

Advertisement

ಒಂದೆಡೆ, ಕಾಂಗ್ರೆಸ್‌ನವರನ್ನು ಹತ್ತಿಕ್ಕಲು, ಮತ್ತೂಂದೆಡೆ, ಜನರ ಗಮನವನ್ನು ಬೇರೆಡೆ ಸೆಳೆಯಲು ಮಧ್ಯಂತರ ಚುನಾವಣೆ ಮತ್ತು ಗ್ರಾಮ ವಾಸ್ತವ್ಯದ ನಾಟಕ ಆಡುತ್ತಿದ್ದೀರಿ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಸಿಎಂಗೆ ಟಾಂಗ್‌: ಕಳೆದ 13 ತಿಂಗಳನ್ನು ನೀವು ಪಂಚತಾರಾ ಹೋಟೆಲ್‌ನಲ್ಲೇ ಕಳೆದಿರಿ. ನಾವು ಹೇಳಿದಾಗ ನೀವು ಹೊರ ಬರದೇ, ಈಗ ಏಕಾಏಕಿ ಹಳ್ಳಿಗಳು ಹೇಗೆ ನೆನಪಾದವು? ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಆ ಭಾಗದ ಜನರ ವಿರೋಧಿ ನಿಲುವನ್ನೇ ತಾಳುತ್ತಾ ಬಂದಿದ್ದೀರಿ. “ಉತ್ತರ ಕರ್ನಾಟಕದ ಜನ ನನಗೆ ಓಟು ನೀಡಿಲ್ಲ.

ನಾನು ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರ ಕೃಪಾಕಟಾಕ್ಷದಿಂದ. ಹಾಗಾಗಿ, ನಾನು ಉತ್ತರ ಕರ್ನಾಟಕದ ಜನರ ಹಂಗಿನಲ್ಲಿಲ್ಲ. ನಾನಿರುವುದು ರಾಹುಲ್‌ಗಾಂಧಿ ಹಂಗಿನಲ್ಲಿ’ ಎಂದಿದ್ದ ನಿಮಗೆ ಈಗ ಉತ್ತರ ಕರ್ನಾಟಕದ ನೆನಪಾದದ್ದು, ನನಗೆ ಆಶ್ಚರ್ಯ ಹಾಗೂ ವಿಸ್ಮಯ ಮೂಡಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next