ಬೆಳಗಾವಿ: ಸಮಾಜ ಕಲ್ಯಾಣ ಇಲಾಖೆಯಡಿ ಕ್ರೈಸ್ ವತಿಯಿಂದ ನಡೆಯುತ್ತಿರುವ ರಾಜ್ಯದ ಸುಮಾರು 830 ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬಂದಿಗೆ ಒಂದು ತಿಂಗಳೊಳಗೆ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪರಿಷತ್‌ನಲ್ಲಿ ಮರಿತಿಬ್ಬೇಗೌಡ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ವಸತಿ ಶಾಲೆ ಗಳಲ್ಲಿ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಲ್ಲಿ ಎ ಮತ್ತು ಬಿ ವಿಭಾಗಗಳನ್ನು ಆರಂಭಿಸಲಾಗುವುದು ಎಂದರು.
ರಾಜ್ಯದಲ್ಲಿ 830 ವಸತಿ ಶಾಲೆಗಳು ಇದ್ದು, ಒಟ್ಟು 19,094 ಬೋಧಕ, ಬೋಧಕೇತರ ಹುದ್ದೆಗಳ ಮಂಜೂರಾತಿಯಲ್ಲಿ 5,821 ಕಾಯಂ ಸಿಬಂದಿ ಇದ್ದಾರೆ. ಇವರೆಲ್ಲರನ್ನೂ ಒಂದು ತಿಂಗಳಲ್ಲಿ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ವ್ಯಾಪ್ತಿಗೆ ತರಲಾಗುವುದು. ಶೇ.10ರಷ್ಟು ವಿಶೇಷ ಭತ್ತೆ ನೀಡಿಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, 6ನೇ ವೇತನ ಆಯೋಗ ಯಾವುದೇ ಭತ್ಯೆಗೆ ಶಿಫಾರಸು ಮಾಡಿಲ್ಲ.ಇದರಿಂದ ಕ್ಯಾಂಪಸ್ ವಿಶೇಷ ಭತ್ತೆ ನೀಡಲಾಗದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ, ವಸತಿ ಶಾಲೆಗಳ ಸಿಬಂದಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿಲ್ಲ. ಸಿಬಂದಿಗೆ ಶೇ.10ರಷ್ಟು ವಿಶೇಷ ಭತ್ಯೆ ನೀಡಲು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಅಲ್ಪಸಂಖ್ಯಾಕ ವಸತಿ ಶಾಲೆಗಳಲ್ಲಿ ವಿಶೇಷ ಭತ್ತೆ ನೀಡಲಾಗುತ್ತಿದೆ. ವಸತಿ ಶಾಲೆಗಳ ಸಿಬಂದಿಗೆ ಜ್ಯೋತಿ ಸಂಜೀವಿನ ಜಾರಿಗೊಳಿಸಬೇಕು, ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು ಎಂದರು.