Advertisement

ಬಹುಮತ ಸಾಬೀತುಪಡಿಸುವವರೆಗೂ ಶಾಸಕರಿಗೆ ರೆಸಾರ್ಟ್‌ ವಾಸ್ತವ್ಯ ಅನಿವಾರ್ಯ

06:35 AM May 21, 2018 | Team Udayavani |

ಬೆಂಗಳೂರು: “ಆಪರೇಷನ್‌ ಕಮಲ’ದ ಭೀತಿಯಿಂದ ಬಹುಮತ ಸಾಬೀತುಪಡಿಸುವವರೆಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಹೋಟೆಲ್‌, ರೆಸಾರ್ಟ್‌ ವಾಸ್ತವ್ಯ ತಪ್ಪಿದ್ದಲ್ಲ.

Advertisement

ಎರಡೂ ಪಕ್ಷಗಳು ತಮ್ಮ ಶಾಸಕರಿಗೆ ಹೋಟೆಲ್‌ನಲ್ಲೇ ಉಳಿದುಕೊಳ್ಳುವಂತೆ ಸೂಚನೆ ನೀಡಿದ್ದು, ಕುಟುಂಬ ಸದಸ್ಯ ರನ್ನು ಹೊರತು ಪಡಿಸಿ ಯಾರನ್ನೂ ಸಂಪರ್ಕಿಸದಂತೆ ತಾಕೀತು ಮಾಡಿವೆ.

ಕಳೆದ ಗುರುವಾರದಿಂದ ಎರಡೂ ಪಕ್ಷಗಳ ಶಾಸಕರು ತಮ್ಮ ಕ್ಷೇತ್ರ ಮತ್ತು ಕುಟುಂಬದಿಂದ ದೂರವಾಗಿ ರೆಸಾರ್ಟ್‌, ಹೋಟೆಲ್‌ಗಳಲ್ಲೇ ಕಾಲ ಕಳೆಯುತ್ತಿದ್ದು, ಚುನಾವಣೆಯಲ್ಲಿ ಗೆದ್ದು ತಮ್ಮ ಪಕ್ಷ ಸರ್ಕಾರ ರಚಿಸುತ್ತಿದ್ದರೂ ತಮ್ಮ ಕ್ಷೇತ್ರಗಳಲ್ಲಿ ಸಂಭ್ರಮಾಚರಣೆ ಮಾಡಲು ಶಾಸಕರಿಗೆ ಅವಕಾಶ ವಿಲ್ಲದಂತಾಗಿದೆ. ಆದರೆ, ಭಾನುವಾರ ಕಾಂಗ್ರೆಸ್‌ ಶಾಸಕರಿಗೆ ಕುಟುಂಬ ಸದಸ್ಯರೊಂದಿಗೆ ಬೆರೆಯಲು ಅವಕಾಶ ಮಾಡಿಕೊಡಲಾಗಿತ್ತು.

ಕೆಲವು ಶಾಸಕರ ಕುಟುಂಬಸ್ಥರು ಹೋಟೆಲ್‌ಗೆ ಬಂದು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಈ ಮಧ್ಯೆ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಹೋಟೆಲ್‌, ರೆಸಾರ್ಟ್‌ಗಳ ಮಧ್ಯೆ ಓಡಾಟ, ಸರಣಿ ಸಭೆಗಳಿಂದ ಶಾಸಕರು ಸುಸ್ತಾಗಿದ್ದಾರೆ. ಹೀಗಾಗಿ, ಇನ್ನೆರಡು ದಿನ ಶಾಸಕರೊಂದಿಗೆ ಹೆಚ್ಚು ಸಭೆಗಳನ್ನು ನಡೆಸದಿರಲು ನಿರ್ಧರಿಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌, ಹೋಟೆಲ್‌ನಲ್ಲೇ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿವೆ.

ರಾಜಧಾನಿಯ ಲಿ ಮೆರಿಡಿಯನ್‌ ಹೋಟೆಲ್‌ನಲ್ಲಿದ್ದ ಜೆಡಿಎಸ್‌ ಶಾಸ ಕರು ದೊಡ್ಡಬಳ್ಳಾಪುರ ಸಮೀಪದ ರೆಸಾರ್ಟ್‌ಗೆ ತೆರಳಿದ್ದಾರೆ. ಕಾಂಗ್ರೆಸ್‌ ಶಾಸಕರು ಹಿಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

Advertisement

ಮುಂದುವರಿದ ಭೀತಿ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಸೆಳೆಯಲು ವಿಫ‌ಲರಾಗಿ ಯಡಿಯೂರಪ್ಪ ವಿಶ್ವಾಸಮತ ಯಾಚಿಸದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಎರಡೂ ಪಕ್ಷಗಳಲ್ಲಿ ಆಪರೇಷನ್‌ ಕಮಲದ ಭೀತಿ ಮಾತ್ರ ದೂರವಾಗಿಲ್ಲ. ಬಿಜೆಪಿಯವರು ಮತ್ತೆಲ್ಲಿ ಪಕ್ಷದ ಶಾಸಕರನ್ನು ಸೆಳೆದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಎಚ್‌. ಡಿ.ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸದಂತೆ ಮಾಡುತ್ತಾರೋ ಎಂಬ ಆತಂಕ ಮುಂದುವರಿದಿದೆ. ಹೀಗಾಗಿ, ಬಹುಮತ ಸಾಬೀತು ಮಾಡುವವರೆಗೆ ತಾಳ್ಮೆಯಿಂದ ಒಟ್ಟಾಗಿ ಇರುವಂತೆ ನಾಯಕರು ಸೂಚನೆ ನೀಡಿದ್ದಾರೆ.

ಇನ್ನೆರಡು ದಿನ ವಿಶ್ರಾಂತಿ ಪಡೆಯಿರಿ: ಜೆಡಿಎಸ್‌ ಶಾಸಕರು ತಂಗಿರುವ ಖಾಸಗಿ ಹೋಟೆಲ್‌ಗೆ ತೆರಳಿ, ಶುಕ್ರವಾರ ಅವರೊಂದಿಗೆ ಸಭೆ ನಡೆಸಿದ ಮೈತ್ರಿ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌.ಡಿ.  ಕುಮಾರಸ್ವಾಮಿ, “ನಿಮ್ಮ ಮೇಲೆ ಅಪನಂಬಿಕೆ ಯಿಂದ ಹೋಟೆಲ್‌ನಲ್ಲಿ ಕೂಡಿ ಹಾಕಿಲ್ಲ. ಎಲ್ಲರೂ ಒಟ್ಟಾಗಿದ್ದರೆ ನಮಗೆ ಧೈರ್ಯ ಬರುತ್ತದೆ ಎಂಬ ಕಾರಣಕ್ಕಾಗಿ ಇಲ್ಲೇ ಇರಿ ಎಂದು ಕೇಳಿಕೊಳ್ಳುತ್ತೇನೆ. ಚುನಾವಣೆ ಗೆಲುವಿಗಾಗಿ ಎರಡು ವರ್ಷದಿಂದ ಅವಿರತವಾಗಿ ಕೆಲಸ ಮಾಡಿದ್ದೀರಿ. ಅದರಲ್ಲೂ ಕಳೆದ 3 ತಿಂಗಳಿ ನಿಂದ ಒಂದು ಕ್ಷಣ ಕೂಡ ವಿರಮಿಸದೆ ಪಕ್ಷ ಹಾಗೂ ನಿಮ್ಮ ಗೆಲುವಿಗಾಗಿ ದುಡಿದಿದ್ದೀರಿ. ಹೀಗಾಗಿ,ಇನ್ನೆರಡು ದಿನ ವಿಶ್ರಾಂತಿ ಪಡೆಯಿರಿ’ ಎಂದು ಮನವಿ ಮಾಡಿದ್ದಾರೆ.

ಡಿಕೆಶಿ ಹೇಳಿದಂತೆ ಕೇಳಿ: ಇನ್ನೊಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಶಾಸಕರೊಂದಿಗೆ ಸಭೆ ನಡೆಸಿ, ಕಳೆದ ನಾಲ್ಕು ದಿನಗಳಿಂದ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಎಲ್ಲರೂ ಒಟ್ಟಾಗಿ ಸಹಕಾರ ನೀಡಿದ್ದೀರಿ. ಹೊಸ ಸರ್ಕಾರ ರಚನೆಯಾಗಿ ಬಹುಮತ ಸಾಬೀತುಪಡಿಸುವವರೆಗೆ ಹೋಟೆಲ್‌ನಲ್ಲೇ ವಾಸ್ತವ್ಯವಿರಿ.ಇನ್ನೂ ಮೂರ್‍ನಾಲ್ಕು ದಿನ ಹೋಟೆಲ್‌ನಲ್ಲೇ ಇರುವುದು ಅನಿವಾರ್ಯ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ಬಹುಮತ ಸಾಬೀತು ಮಾಡಿದ ನಂತರ ಕ್ಷೇತ್ರಕ್ಕೆ ಕಳಿಸಿಕೊಡಲಾಗುವುದು. ಅದುವರೆಗೆ ಡಿ.ಕೆ. ಶಿವಕುಮಾರ್‌ ಸೂಚನೆಯಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

ಡಿಕೆಶಿ ಸೂಚನೆ: ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ
ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್‌.ಡಿ.  ಕುಮಾರ ಸ್ವಾಮಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಇದಾದ ನಂತರ ಸ್ಪೀಕರ್‌ ಆಯ್ಕೆ ನಡೆಯಲಿದೆ. ಬಳಿಕ, ಬಹುಮತ ಸಾಬೀತು ಮಾಡಲಿದ್ದಾರೆ. ಇದಾದ ನಂತರ, ಸಚಿವರ ಪ್ರಮಾಣ ವಚನ ಪ್ರಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ನೀವೇಲ್ಲರೂ ಹೋಟೆಲ್‌ನಲ್ಲೇ ಇರಬೇಕು ಎಂದು ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ಎಲ್ಲ ಚರ್ಚೆಗಳೂ ಹೋಟೆಲ್‌ನಲ್ಲೇ
ಬಹುಮತ ಸಾಬೀತು ಸೇರಿ ಉಪಮುಖ್ಯಮಂತ್ರಿ, ಸಚಿವ ಸ್ಥಾನ, ಸ್ಪೀಕರ್‌ ಆಯ್ಕೆ ಮೊದಲಾದ ಎಲ್ಲ ವಿಷಯಗಳ ಬಗ್ಗೆಯೂ ಕಾಂಗ್ರೆಸ್‌ ನಾಯಕರು ಹೋಟೆಲ್‌ನಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಲೋಕಸಭೆಯ ಕಾಂಗ್ರೆಸ್‌ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕಾಂಗ್ರೆಸ್‌ ಮುಖಂಡರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌,ರಮೇಶ್‌ ಜಾರಕಿಹೊಳಿ, ಎಂ.ಕೃಷ್ಣಪ್ಪ ಮೊದಲಾದವರು ಹೋಟೆಲ್‌ನಲ್ಲೇ ಬೀಡು ಬಿಟ್ಟಿದ್ದಾರೆ.

ತಮ್ಮ ಶಾಸಕರ ಮೇಲೆ ನಿಗಾ ಇಟ್ಟಿರುವ ಮುಖಂಡರು ಹೋಟೆಲ್‌ನಿಂದ ಹೊರಗೆ ಹೋಗದಂತೆ ಎಚ್ಚರ ವಹಿಸಿದ್ದಾರೆ. ಎಲ್ಲಾ ಶಾಸಕರು ಹೋಟೆಲ್‌ ಒಳಗೆ ಸ್ವತಂತ್ರವಾಗಿ ವ್ಯವಹರಿಸುತ್ತಿದ್ದಾರೆ.

ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ಹೋಟೆಲ್‌ ನಿಂದ ಹೊರ ಹೋಗಲು ಬಿಡುತ್ತಿಲ್ಲ.ಇನ್ನೊಂದೆಡೆ, ಡಿ.ಕೆ.ಶಿವಕುಮಾರ್‌, ಈಶ್ವರ್‌ ಖಂಡ್ರೆ ಮೊದಲಾದ ನಾಯಕರು ಶಾಸಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಕೆಲವರು, ನಾಲ್ಕೈದು ಬಾರಿ ಗೆದ್ದವರಿಗೆ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಹಿರಿಯರನ್ನು ಕಡೆಗಣಿಸದಂತೆ ಸಲಹೆ ನೀಡಿದರು. ಸಚಿವ ಸ್ಥಾನ ತಪ್ಪಿದವರಿಗೆ ನಿಗಮ ಮಂಡಳಿ ನೀಡುವಂತೆಯೂ ಮನವಿ ಮಾಡಿದರು ಎನ್ನಲಾಗಿದೆ.

ಚೆನ್ನಾಗಿ ಕೆಲಸ ಮಾಡಿ ಎಂದ ಆಂಜನೇಯ
ಫ‌ಲಿತಾಂಶದ ನಂತರ ಸೋಲಿನ ಹತಾಶೆಯಿಂದ ಕ್ಷೇತ್ರ ಬಿಟ್ಟು ಹೊರಬಾರದ ಮಾಜಿ ಸಚಿವ ಎಚ್‌. ಆಂಜನೇಯ ಅವರು, ಭಾನುವಾರ ಹಿಲ್ಟನ್‌ ಹೋಟೆಲ್‌ಗೆ ಆಗಮಿಸಿ, ಶಾಸಕರೊಂದಿಗೆ ಕುಶಲೋಪರಿ ನಡೆಸಿದರು. ಹೊಸ ಸರ್ಕಾರದಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next