ಚಿಕ್ಕೋಡಿ: ಸ್ಥಳೀಯ ಪೌರ ಕಾರ್ಮಿಕರಿಗೆ ವಿಶೇಷ ಆದ್ಯತೆ ನೀಡುವುದರೊಂದಿಗೆ ಸ್ವಂತ ಮನೆ ನಿರ್ಮಿಸಲು ಪೌರ ಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ನಿಪ್ಪಾಣಿ ನಗರಸಭೆಯ 46 ಜನ ಪೌರಕಾರ್ಮಿಕರಿಗೆ ತಲಾ 6 ಲಕ್ಷ ರೂ. ಮಂಜೂರು ಮಾಡಿಸಿ ಆದೇಶ ಪ್ರತಿ ನೀಡಲಾಗಿದೆಯೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಿಪ್ಪಾಣಿ ನಗರಸಭೆಯ ಪೌರ ಕಾರ್ಮಿಕರಿಗೆ ವಸತಿ ಯೋಜನೆಯ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಪೌರಕಾರ್ಮಿಕರಿಗೆ ತಮ್ಮ ಹಕ್ಕಿನ ಮನೆ ದೊರಕಬೇಕೆಂದು ಕಳೆದ ಐದು ವರ್ಷಗಳಿಂದ ಪ್ರಯತಿಸಲಾಗುತ್ತಿತ್ತು. ಮೊದಲ ಹಂತದಲ್ಲಿ 80 ಕಾರ್ಮಿಕರಿಗೆ ಪ್ಲಾಟ್ ನೀಡುವ ಕಾರ್ಯ ಕೈಗೊಳ್ಳಲಾಗಿತ್ತು. ಇದರಲ್ಲಿನ 46 ಜನ ಪೌರಕಾರ್ಮಿಕರಿಗೆ ಈಗಾಗಲೇ ಗೃಹಭಾಗ್ಯ ಯೋಜನೆಯಡಿ ತಲಾ 6 ಲಕ್ಷ.ರೂ. ಮಂಜೂರು ಮಾಡಲಾಗಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಜೀ ಕನಸಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.50 ಲಕ್ಷರೂ. ಕೂಡ ಮಂಜೂರು ಮಾಡಿಸಿ ಕೊಡಲಾಗುವುದು ಎಂದರು.
ಯಾವ ಪೌರಕಾರ್ಮಿಕರ ಸ್ಥಿತಿ ಚೆನ್ನಾಗಿದೆಯೋ ಅವರಿಗೆ 1.50 ಲಕ್ಷದ ವೆಚ್ಚದಲ್ಲಿ ಮನೆ ನಿರ್ಮಿಸಲು ಅನುಕೂಲ ಮಾಡಲಾಗುವುದು ಆದರೆ ಯಾರಿಗೆ ಅಸಾಧ್ಯವೋ ಅವರಿಗೆ ಕಡಿಮೆ ಸಾಲದ ಬಡ್ಡಿದರದಲ್ಲಿ 1.50 ಲಕ್ಷ ಸಾಲ ನೀಡಿ ಸುಸಜ್ಜಿತ ಮನೆ ಒದಗಿಸಲಾಗುವುದು. ಸರ್ವೇ ನಂ. 178/ಬ ಯಲ್ಲಿನ 2 ಎಕರೆ ಜಾಗದಲ್ಲಿ 80 ಕಾರ್ಮಿಕರಿಗೆ ಪ್ಲಾಟ್‌ಗಳ ಆದೇಶ ಪ್ರತಿ ನೀಡಲಾಗಿದೆ.
ಉಳಿದ ಕಾರ್ಮಿಕರಿಗೆ ಇನ್ನುಳಿದ ಯೋಜನೆಗಳಡಿ ವಸತಿ ಮನೆಗಳಿಗೆ ಮಂಜೂರಾತಿ ನೀಡಲಾಗುವುದು. ಕೇಂದ್ರ ಸರ್ಕಾರದ ಪ್ರತಿ ಯೋಜನೆಯನ್ನು ಕ್ಷೇತ್ರದ ಪ್ರತಿಯೊಬ್ಬರ ಮನೆ ಬಾಗಿಲಿಗೂ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ, ನಗರಸೇವಕರಾದ ಜಯವಂತ ಭಾಟಲೆ, ಸದ್ದಾಂ ನಾಗಾರ್ಜಿ, ರಾಜು ಗುಂದೇಶಾ, ಸಂತೋಶ ಸಾಂಗಾವಕರ, ನಗರಸೇವಕಿಯರಾದ ನೀತಾ ಬಾಗಡಿ, ಪ್ರಭಾವತಿ ಸೂರ್ಯವಂಶಿ, ರಾಣಿ ಶೇಲಾರ್, ದೀಪಾಲಿ ಗಿರಿ, ರಂಜನಾ ಇಂಗವಲೆ, ಅರುಣಾ ಮುದಕುಡೆ, ಆಶಾ ಟವಳೆ, ಉಪಾಸನಾ ಗಾರವೆ, ಪ್ರಣವ ಮಾನವಿ ಇತರರು ಉಪಸ್ಥಿತರಿದ್ದರು.