Advertisement

ತಾಲೂಕಿಗೊಂದು ವಸತಿ ಪದವಿ ಕಾಲೇಜು

08:15 AM Feb 28, 2018 | Team Udayavani |

ಬೆಂಗಳೂರು: ಪ್ರತಿ ತಾಲೂಕಿಗೊಂದು ವಸತಿ ಪದವಿ ಕಾಲೇಜು ಪ್ರಾರಂಭಿಸುವ ಚಿಂತನೆ ಸರ್ಕಾರದ ಮುಂದಿದೆ
ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಏರ್ಪಡಿಸಿ ದ್ದ 2017-18ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿ ಹಾಗೂ ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ತಲಾ 25 ಕೋಟಿ ರೂ. ವೆಚ್ಚದಲ್ಲಿ 16 ವಸತಿ ಪದವಿ ಕಾಲೇಜುಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಅದರಲ್ಲಿ ಈಗಾಗಲೇ 10 ಕಡೆ ಪದವಿ ವಸತಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಹೈದರಬಾದ್‌ ಕರ್ನಾಟಕ ಭಾಗದಲ್ಲಿ ಆರಂಭಿಸಬೇಕಾಗಿರುವ 6 ಕಾಲೇಜುಗಳಿಗೆ ಸಚಿವ ಸಂಪುಟದ ಅನುಮೋದನೆ ಸಿಗಬೇಕಾಗಿದೆ. ವಸತಿ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು ಅನ್ನುವುದು ಸರ್ಕಾರದ ಉದ್ದೇಶ. ಅದರಂತೆ ಪ್ರತಿ ತಾಲೂಕು ಕೇಂದ್ರದಲ್ಲಿ ವಸತಿ ಪದವಿ ಕಾಲೇಜು ಸ್ಥಾಪಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು
ರಾಯರಡ್ಡಿ ತಿಳಿಸಿದರು.

Advertisement

ಮೊದಲ ಹಂತದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ನೀಡಲಾಯಿತು. ಉಳಿದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಒದಗಿಸಲು ಸರ್ಕಾರ ನಿರ್ಧರಿಸಿತು. ಅದರಂತೆ 1.50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ನೀಡಲಾಗುತ್ತಿದೆ. ಸಾಂಕೇತಿಕವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ಕಾಲೇಜುಗಳ 20 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಗಿದೆ. ಉಳಿದ ಲ್ಯಾಪ್‌ಟಾಪ್‌ಗ್ಳನ್ನು ಸಂಬಂಧ ಪಟ್ಟ ಕಾಲೇಜಿನ ಪ್ರಾಂಶುಪಾಲರ ಮೂಲಕ ವಿದ್ಯಾರ್ಥಿ ಗಳಿಗೆ 
ತಲುಪಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, ಇದು 21ನೇ ಶತಮಾನ. ಜೊತೆಗೆ ತಂತ್ರಜ್ಞಾನ, ಸ್ಪರ್ಧೆ, ಗುಣ ಮಟ್ಟದ ಶತಮಾನವೂ ಹೌದು. ಈ ಶತಮಾನದಲ್ಲಿ ಯಶಸ್ಸು ಕಾಣಬೇಕಾದರೆ ಜಾಗತಿಕ ಮಾರುಕಟ್ಟೆಯ ಪೈಪೋಟಿ ನಡೆಸಿ ಗೆಲ್ಲಬೇಕು. ಶಿಕ್ಷಣದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾಗುವ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆ ಪೈಕಿ ಉಚಿತ ಲ್ಯಾಪ್‌ಟಾಪ್‌ ವಿತರಣೆ ಒಂದು ಪ್ರಮುಖ ಕಾರ್ಯಕ್ರಮ. ಲ್ಯಾಪ್‌ ಟಾಪ್‌ಗ್ಳನ್ನು ಸದ್ಬಳಕೆ ಮಾಡಿಕೊಂಡು
ನಿಮ್ಮ ಶೈಕ್ಷಣಿಕೆ ಏಳಿಗೆ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮ 
ದಲ್ಲಿ ಸಚಿವರಾದ ಟಿ.ಬಿ. ಜಯಚಂದ್ರ, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌, ಎಂ.ಆರ್‌. ಸೀತಾರಾಂ, ಮೇಯರ್‌ 
ಸಂಪತ್‌ರಾಜ್‌ ಮತ್ತಿತರರು ಇದ್ದರು.

ಲ್ಯಾಪ್‌ಟಾಪ್‌ ಖರೀದಿಗೆ ಇನ್ನೂ ಟೆಂಡರ್‌ ಸಹ ಕರೆದಿರಲಿಲ್ಲ. ಆಗಲೇ 300 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋ ಪಿಸಲಾಯಿತು. ಆದರೆ, ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸದನ ಸಮಿತಿ ವರದಿ ಕೊಟ್ಟಿತು. 
ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next