ಮುಂಬಯಿ : ವೈದ್ಯರ ಮೇಲೆ ನಡೆದಿರುವ ಹಲವಾರು ಹಲ್ಲೆ ಪ್ರಕರಣಗಳನ್ನು ಪ್ರತಿಭಟಿಸಿ ಮಹಾರಾಷ್ಟ್ರದ ಆದ್ಯಂತ ರೆಸಿಡೆಂಟ್ ಡಾಕ್ಟರ್‌ಗಳು ನಡೆಸುತ್ತಿದ್ದ ಐದು ದಿನಗಳ ಮುಷ್ಕರವನ್ನು ಕೊನೆಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬಾಂಬೆ ಹೈಕೋರ್ಟ್ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರತಿಭಟನೆ ನಿರತ ವೈದ್ಯರಿಗೆ ತಮ್ಮ ಮುಷ್ಕರವನ್ನು ಕೊನೆಗೊಳಿಸಲು ಅಂತಿಮ ಗಡುವು ನೀಡಿದ್ದರು.
ಮುಷ್ಕರ ನಿರತ ವೈದ್ಯರ ಎಲ್ಲ ಬೇಡಿಕೆಗಳನ್ನು ಪರಿಗಣಿಸಲಾಗುವುದೆಂಬ ಆಶ್ವಾಸನೆಯನ್ನು ರಾಜ್ಯ ಸರಕಾರ ನೀಡಿತ್ತು.
ಪೌರಾಡಳಿತೆಯ ಕೆಇಎಂ ಆಸ್ಪತ್ರೆಯ ಡೀನ್ ಆಗಿರುವ ಡಾ. ಅವಿನಾಶ್ ಸುಪೆ ಮಾಧ್ಯಮದೊಂದಿಗೆ ಮಾತನಾಡುತ್ತಾ, “ಹೆಚ್ಚಿನೆಲ್ಲ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೊರ ರೋಗಿ ವಿಭಾಗಗಳೆಲ್ಲ ಸೇವಾನಿರತವಾಗಿವೆ. ರೆಸಿಡೆಂಟ್ ಡಾಕ್ಟರ್‌ಗಳು ಜನರಲ್ ವಾರ್ಡ್‌ಗಳಿಗೆ ಭೇಟಿ ಕೊಟ್ಟಿದ್ದಾರೆ. ಪರಿಸ್ಥಿತಿಯು ಬೇಗನೆ ಮಾಮೂಲಿಗೆ ಬರುವುದೆಂಬ ವಿಶ್ವಾಸ ನಮಗಿದೆ’ ಎಂದು ಹೇಳಿದ್ದಾರೆ.
ಸಯಾನ್ ಮತ್ತು ನಾಯರ್‌ಆಸ್ಪತ್ರೆಗಳಲ್ಲಿ ಕೂಡ ರೆಸಿಡೆಂಟ್ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದವರು ತಿಳಿಸಿದರು.
ರಾಜ್ಯದ ವಿವಿಧೆಗಳಲ್ಲಿನ ಆಸ್ಪತ್ರೆಗಳಲ್ಲಿ ಸೇವಾನಿರತರಾಗಿರುವ ರೆಸಿಡೆಂಟ್ ಡಾಕ್ಟರ್‌ಗಳ ಮೇಲೆ ಅನೇಕ ಹಲ್ಲೆ ಪ್ರಕರಣಗಳು ನಡೆದಿರುವುದನ್ನು ಪ್ರತಿಭಟಿಸಿ ಕಳೆದ ಸೋಮವಾರದಿಂದ 4,500ಕ್ಕೂ ಅಧಿಕ ರೆಸಿಡೆಂಟ್ ಡಾಕ್ಟರ್‌ಗಳ ಸಾಮೂಹಿಕ ರಜೆಯ ಮೇಲೆ ತೆರಳಿದ್ದರು. ಇದರಿಂದ ಸರಕಾರಿ ಹಾಗೂ ಮುನಿಸಿಪಲ್ ಆಸ್ಪತ್ರೆಗಳಲ್ಲಿನ ಓಪಿಡಿ ಮತ್ತು ಜನರಲ್ ವಾರ್ಡ್‌ಗಳಲ್ಲಿನ ಆರೋಗ್ಯ ಸೇವೆಯು ತೀವ್ರವಾಗಿ ಬಾಧಿತವಾಗಿತ್ತು.