ಬೆಂಗಳೂರು: ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿ ಗಳಿಗೆ ಕಾನೂನಿನ ಕುರಿತು ಜಾಗೃತಿ ಮೂಡಿಸಲು “ಪುನರ್ಮನನ ಕಾರ್ಯಕ್ರಮ’ (ಓರಿಯಂಟೇಷನ್ ಪ್ರೋಗ್ರಾಂ) ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಾಲ ನ್ಯಾಯ (ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೈಕೋರ್ಟ್ ಸ್ವಯಂಪ್ರೇರಿತ ವಾಗಿ ದಾಖಲಿಸಿರುವ ಹಾಗೂ “ಬಚ್‌ಪನ್ ಬಚಾವೋ’ ಸ್ವಯಂ ಸೇವಾ ಸಂಸ್ಥೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ.ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಈ ಮಾಹಿತಿ ನೀಡಲಾಗಿದೆ.
ಅರ್ಜಿ ವಿಚಾರಣೆಗೆ ಬಂದಾಗ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದರಂತೆ, “ಎಸ್ಪಿ, ಡಿವೈಎಸ್ಪಿ, ಡಿಸಿಪಿ, ಎಸಿಪಿ ಸೇರಿದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಾನೂನಿನ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಸಂಬಂಧ ಈಗಾಗಲೇ ಅಡ್ವೋಕೇಟ್ ಜನರಲ್ ಅವರ ಕಚೇರಿಗೆ ಪತ್ರ ಬರೆಯಲಾಗಿದೆ. ಕಾರ್ಯಕ್ರಮದ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗು ವುದು’ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. “ಸಂಜ್ಞೆಯ’ ಅಥವಾ “ನ್ಯಾಯವೇದ್ಯ’ (ಕಾಗ್ನಿ ಜೆಬಲ್) ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವ ಸಂಬಂಧ ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ 2014ರಲ್ಲಿ ಹೊರಡಿಸಲಾದ ಸುತ್ತೋಲೆಯನ್ನು 2020ರ ಮಾ.3ರಂದು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಳಿಸಿಕೊಡಲಾಗಿದ್ದು, ಸೂಚನೆಗಳನ್ನು ನೀಡಲಾಗಿದೆ.
ಯಾವುದೇ ದೂರು ಕಾಗ್ನಿಜೆಬಲ್ ಪ್ರಕರಣ ಎಂದು ಮೇಲ್ನೋಟಕ್ಕೆ ಖಚಿತವಾದರೆ ಠಾಣಾಧಿಕಾರಿ (ಎಸ್‌ಎಚ್‌ಓ) ಎಫ್ಐಆರ್ ದಾಖಲಿಸಿಕೊಳ್ಳಬೇಕು. “ಅಸಂಜ್ಜೆಯ’ (ನಾನ್ ಕಾಗ್ನಿಜೆಬಲ್) ಪ್ರಕರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದರೆ ದೂರುದಾರರು ಅಥವಾ ಮಾಹಿತಿದಾರರಿಗೆ “ಸ್ವೀಕೃತಿ’ ಕೊಡಬೇಕು. ಇಂತಹ ಸಂದರ್ಭದಲ್ಲಿ ಪ್ರಕರಣ ನಾನ್ ಕಾಗ್ನಿಜೆಬಲ್ ಹೌದು ಅಥವಾ ಅಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತದೆ.
ದೂರು, ಕಾಗ್ನಿಜೆಬಲ್ ಪ್ರಕರಣ ಎಂದು ಋಜುವಾತುಪಡಿಸಿಕೊಳ್ಳಲು ದೂರು ದಾಖಲಾದ ದಿನದಿಂದ 15 ದಿನಗಳಲ್ಲಿ ವಿಚಾರಣೆ ನಡೆಸುವ ಬಗ್ಗೆ ಠಾಣಾಧಿಕಾರಿಯು ದೂರುದಾರನಿಗೆ ದೃಢೀಕರಣ ನೀಡಬೇಕು. ಅಸಂಜ್ಞೆಯ (ನಾನ್ ಕಾಗ್ನಿಜೆಬಲ್) ಪ್ರಕರಣ ಎಂದು ಕಂಡು ಬಂದಲ್ಲಿ ಅದರ ಬಗ್ಗೆಯೂ ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು. ಪ್ರಾಥಮಿಕ ತನಿಖೆಯಲ್ಲಿ ಕಂಡು ಬರುವ ಅಂಶಗಳನ್ನು ಆಧರಿಸಿ ಪ್ರಕರಣ ಇತ್ಯರ್ಥಪಡಿಸಬೇಕು.
ಆ ಬಗ್ಗೆ ಠಾಣಾಧಿಕಾರಿಯು ದೂರುದಾರನಿಗೆ ಮಾಹಿತಿ ಒದಗಿಸಬೇಕು. ಈ ಬಗ್ಗೆ ಮೇಲಾಧಿಕಾರಿಗಳು ನಿಗಾ ವಹಿಸಬೇಕು. ಈ ಸಂಬಂಧ ಠಾಣಾಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಲು ಮೇಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಪ್ಪಿತಸ್ಥ ಠಾಣಾಧಿಕಾರಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.