Advertisement

ಮಳೆ ನೀರಿಗೆ ಜಲಾಶಯ ಸಂಪೂರ್ಣ ಭರ್ತಿ:  ಮಲಪ್ರಭಾ ಹಳೆ ಸೇತುವೆ ಜಲಾವೃತ

06:55 PM Sep 03, 2022 | Team Udayavani |

ಕುಳಗೇರಿ ಕ್ರಾಸ್ (ಬಾಗಲಕೋಟೆ) : ನವಿಲು ತೀರ್ಥ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು ಸದ್ಯ ಮಳೆ ನೀರಿಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಒಳ ಹರಿವಿನ ಸಂಪೂರ್ಣ ನೀರನ್ನು ಮಲಪ್ರಭಾ ನದಿ ಮೂಲಕ ಹರಿ ಬಿಟ್ಟಿದ್ದರಿಂದ ಜಿಲ್ಲೆಯ ಗಡಿ ಭಾಗದ ಹುಬ್ಬಳ್ಳಿ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 218ರ ಸಂಪರ್ಕ ಕಲ್ಪಿಸುವ ಮಲಪ್ರಭಾ ಹಳೆ ಸೇತುವೆ ಜಲಾವೃತಗೊಂಡಿದೆ.

Advertisement

ನವಿಲುತಿರ್ಥ ಜಲಾಶಯದಿಂದ 7544 ಕ್ಯೊಸೆಕ್ ನೀರು ಹರಿಬಿಡಲಾಗಿದ್ದು ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತೆ ಹಲವು ಸೇತುವೆಗಳು ಜಲಾವೃತಗೊಂಡಿವೆ. ಬಾಗಲಕೋಟೆ-ಗದಗ ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.

ರೈತರ ಜಮಿನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಸದ್ಯ ಗೋವಿನಜೋಳ, ಈರುಳ್ಳಿ, ಕಬ್ಬು, ಸೂರ್ಯಕಾಂತಿ, ಹೆಸರು ಸೇರಿದಂತೆ ತೋಟಗಾರಿಕೆ ಬೆಳೆಗಳಾದ ಪೇರಲ, ದಾಳಿಂಬೆ, ಪಪ್ಪಾಯಿ ಮುಂತಾದ ಬೆಳೆಗಳಿಗೆ ನೀರು ನುಗ್ಗಿದ್ದು ನದಿ ಪಾತ್ರದ ರೈತರಲ್ಲಿ ಆತಂಕ ಮನೆಮಾಡಿದೆ. ಮಲಪ್ರಭಾ ಪ್ರವಾಹದ ನೀರು ಹೆಚ್ಚುತ್ತಿದ್ದು ನದಿ ಪಾತ್ರದಲ್ಲಿನ ರೈತರು ಪಂಪ್‌ಸೆಟ್, ಜಾನುವಾರು ಸೇರಿದಂತೆ ತಮ್ಮ ಸಲಕರಣೆಗಳನ್ನು ಬೇರೆಕಡೆ ಸಾಗಿಸುತ್ತಿದ್ದಾರೆ.

ಪ್ರತಿ ವರ್ಷ ಪ್ರವಾಹ: ಸುಮಾರು ವರ್ಷಗಳಿಂದ ಪ್ರತಿ ವರ್ಷ ಬಿಟ್ಟು ಬಿಡದೆ ಪ್ರವಾಹದ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ವಾರದಲ್ಲಿ ಎರಡನೆ ಬಾರಿ ಪ್ರವಾಹ ಬಂದು ಉತ್ತಮ ಬೆಳೆಗಳೆ ಹಾಳಾಗಿವೆ. ಕಳೆದ ಬಾರಿ ಬೆಳೆದಿದ್ದ ಉತ್ತಮ ಬೆಳೆಗಳು ರೈತರ ಕೈ ಸೇರುವ ಸಂದರ್ಭದಲ್ಲಿ ಪ್ರವಾಹಕ್ಕೆ ತುತ್ತಾಗಿದ್ದವು. ಮತ್ತೆ ಸಾಲ ಮಾಡಿ ಬಿತ್ತನೆ ಮಾಡಿದ ರೈತರ ಜಮಿನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಾದಾಮಿ ತಹಸಿಲ್ದಾರ ಜೆ ಬಿ ಮಜ್ಜಗಿ ನದಿ ಪಾತ್ರದ ಗ್ರಾಮಗಳಿಗೆ ಭೆಟಿ ನೀಡಿದ್ದು ಮಲಪ್ರಭಾ ನದಿಯ ಪ್ರವಾಹವನ್ನು ವಿಕ್ಷಿಸಿದರು. ನೀರಿನ ಮಟ್ಟ ಪರಿಶೀಲಿಸಿದ ಅವರು ನಂತರ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಜಾಗ್ರತಿ ಮೂಡಿಸಿದರು. ನದಿ ಪಾತ್ರದಲ್ಲಿ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು, ವಾಹನ ಹಾಗೂ ಜಾನುವಾರುಗಳ ಮೈ ತೊಳೆಯುವುದು ಮಾಡಬಾರದು, ಸೆಲ್ಪಿ ಸೇರಿದಂತೆ ಪ್ರವಾಹದಲ್ಲಿ ಹುಚ್ಚು ಸಾಹಸ ಮಾಡುವ ಗೋಜಿಗೆ ಹೋಗಬಾರದು ಎಂದು ಎಚ್ಚರಿಸಿದರು. ಪ್ರವಾಹ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.

Advertisement

-ಎಮ್ ಎಸ್ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next