Advertisement
ಹೇಮಾವತಿ ಡ್ಯಾಂನಲ್ಲಿ 13 ಟಿಎಂಸಿ ಮಾತ್ರ ಲಭ್ಯ ಹಾಸನ: ಹೇಮಾವತಿ ಜಲಾಶಯ ಈ ವರ್ಷ ಬಹುತೇಕ ಭರ್ತಿಯಾಗುವ ಹಂತ ತಲುಪಿದ್ದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಸಿಗಲೇ ಇಲ್ಲ. ಜಲಾಶಯಕ್ಕೆ ಆ.12ರ ವೇಳೆಗೆ 31.72 ಟಿಎಂಸಿ ನೀರು ಸಂಗ್ರಹವಾಗಿತ್ತು. ಆ.12ರಿಂದ ನಾಲೆಗಳಿಗೆ ನೀರು ಹರಿಸಲು ಆರಂಭಿಸಿದ್ದರಿಂದ ಜಲಾಶಯದ ನೀರಿನ ಸಂಗ್ರಹವು 32 ಟಿಎಂಸಿಗಿಂತ ಮೇಲೆ ಏರಲೇ ಇಲ್ಲ. ಈಗ ಜಲಾಶಯದಲ್ಲಿ ನೀರಿನ ಸಂಗ್ರಹ 17.74 ಟಿಎಂಸಿ ಇದೆ. ಅದ ರಲ್ಲಿ ಬಳಕೆಗೆ ಲಭ್ಯ ನೀರು 13.36 ಟಿಎಂಸಿ ಮಾತ್ರ.
ಮಂಡ್ಯ: ಜೂ.1ರಿಂದ ಸೆ.19ರ ವರೆಗೆ ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ 38.367 ಟಿಎಂಸಿ ನೀರು ಹರಿದು ಹೋಗಿದೆ. ಆ.4ರಂದು ಜಲಾಶಯದಲ್ಲಿ 35.347 ಟಿಎಂಸಿ ನೀರು ಸಂಗ್ರಹವಾಗಿತ್ತು. ಬಳಿಕ ಬೆಳೆ ಹಾಗೂ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಸೆ.21ರ ರಾತ್ರಿ ವೇಳೆಗೆ ಜಲಾಶಯದಲ್ಲಿ 20.563 ಟಿಎಂಸಿ ನೀರು ಮಾತ್ರ ಉಳಿದಿದೆ.
ಈಗ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಹರಿಸಿದರೆ 7 ಟಿಎಂಸಿ ನೀರು ಖಾಲಿಯಾಗಲಿದ್ದು, 13 ಟಿಎಂಸಿ ನೀರು ಉಳಿಯಲಿದೆ. ಇದರಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಇದ್ದು, ಉಳಿದ 8 ಟಿಎಂಸಿ ಕುಡಿಯಲು ಹಾಗೂ ಕೃಷಿ ಬಳಕೆಗೆ ಸಾಕಾಗದಂತಾಗಿದೆ.
Related Articles
ಬೆಂಗಳೂರು: ಕೆಆರ್‌ಎಸ್ ಒಡಲು ಖಾಲಿಯಾಗಿ ಡೆಡ್ ಸ್ಟೋರೇಜ್ ತಲುಪುವ ಹಂತದಲ್ಲಿದ್ದು, ಮಳೆ ಕೊರತೆ ಮುಂದವರಿದರೆ ರಾಜಧಾನಿಗೆ ಜಲಕ್ಷಾಮ ಕಂಟಕ ಖಚಿತ. ಬೆಂಗಳೂರಿನಲ್ಲಿ 10.50 ಲಕ್ಷ ಮನೆಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಈಗಾಗಲೇ ನೀರಿನ ಸಮಸ್ಯೆ ಉಲ್ಬಣಿಸಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬಿಗಡಾಯಿಸಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದಾರೆ. ಕಾವೇರಿ ನೀರನ್ನೇ ಅವಲಂಬಿಸಿರುವ ಬೆಂಗಳೂರಿಗೆ ಪ್ರತಿ ತಿಂಗಳಿಗೆ ಒಂದೂವರೆ ಟಿಎಂಸಿ ನೀರು ಬೇಕಾಗುತ್ತದೆ. ನಿತ್ಯ 1,450 ಎಂಎಲ್‌ಡಿ ಪಂಪ್ ಮಾಡಲಾಗುತ್ತಿದ್ದರೂ ನೀರಿನ ಕೊರತೆ ಉಂಟಾಗಿದೆ. ಕೆಆರ್‌ಎಸ್‌ನಲ್ಲಿ ಲಭ್ಯವಿರುವ ನೀರು ಕೆಲವೇ ದಿನಗಳಿಗೆ ಖಾಲಿ ಆಗುವ ಲಕ್ಷಣ ಗೋಚರಿಸಿರುವುದು ಆತಂಕಕ್ಕೀಡು ಮಾಡಿದೆ.
Advertisement
ಕಬಿನಿ ಡ್ಯಾಂನಲ್ಲಿ ಕುಸಿದ ನೀರಿನ ಸಂಗ್ರಹ ಎಚ್.ಡಿ.ಕೋಟೆ: ಒಟ್ಟು 19.52 ಟಿಎಂಸಿ ಸಾಮರ್ಥ್ಯದ ಕಬಿನಿ ಜಲಾಶಯವೂ ಜುಲೈ ಮಳೆಯಲ್ಲಿ ತುಂಬಿತ್ತು. ತಮಿಳುನಾಡಿಗೆ 15 ದಿನಗಳ ಕಾಲ 10 ಸಾವಿರ ಕ್ಯುಸೆಕ್ ನೀರನ್ನು ಕಬಿನಿ ಜಲಾಶಯದಿಂದಲೇ ಹರಿಸಿದ್ದರಿಂದ ತುಂಬಿದ್ದ ಜಲಾಶಯ ಸಂಗ್ರಹಮಟ್ಟ ಭಾರೀ ಕುಸಿದಿದೆ. ಈಗ ಕಬಿನಿ ಜಲಾಶಯದಲ್ಲಿ 75.70 (14.65) ಟಿಎಂಸಿ ನೀರಿನ ಸಂಗ್ರಹ ಮಟ್ಟ ಹೊಂದಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿಯಲ್ಲಿ ಬಳಕೆಗೆ ಸಿಗುವುದು 11.99 ಟಿಎಂಸಿ ಮಾತ್ರ. ಉಳಿದ 7.52 ಟಿಎಂಸಿಯಲ್ಲಿ 6 ಟಿಎಂಸಿ ಡೆಡ್ ಸ್ಟೋರೇಜ್, ಇನ್ನುಳಿದ 1.52 ಟಿಎಂಸಿ ನೀರನ್ನು ಹಿನ್ನೀರಿನಲ್ಲಿರುವ ಅಪಾರ ಪ್ರಮಾಣದ ವನ್ಯಜೀವಿಗಳು ಹಾಗೂ ಜಲಚರಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವುದರಿಂದ ಬಳಸುವಂತಿಲ್ಲ. ತಮಿಳುನಾಡಿಗೆ ನೀರು ಹರಿಸಿದರೆ ಬೆಂಗಳೂರು ಸಹಿತ ಜಲಾಶಯ ಅವಲಂಬಿತ ನಗರ ಪಟ್ಟಣಗಳು, ನೂರಾರು ಗ್ರಾಮ ಗಳ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ.