ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳ ಟಿಕೆಟ್ ಹಂಚಿಕೆ ತೀರ್ಮಾನ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಹಂತದಲ್ಲಿ ಮಾಡುವುದು ಬೇಡ ಎಂಬ ಕೂಗು ಕಾಂಗ್ರೆಸ್ನಲ್ಲಿ ಎದ್ದಿದೆ.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಚಿವ ಆಂಜನೇಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಚಿವ ಸತೀಶ್ ಜಾರಕಿಹೊಳಿ ಕುಳಿತು ಮೀಸಲು ಕ್ಷೇತ್ರಗಳ ಟಿಕೆಟ್ ತೀರ್ಮಾನ ಮಾಡಲಿ ಎಂಬ ಒತ್ತಡ ಹೆಚ್ಚಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ನಲ್ಲಿ ಹೆಚ್ಚು ಆದ್ಯತೆ ಸಿಗುತ್ತಿದ್ದು ಎಡಗೈ ಸಮುದಾಯ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಅಸಮಾಧಾನ ಇದೆ. ಇದರಿಂದಾಗಿಯೇ ಎಡಗೈ ಸಮುದಾಯ ಬಿಜೆಪಿಯತ್ತ ವಾಲಿದ್ದು ಮತ್ತೆ ಕಾಂಗ್ರೆಸ್ನತ್ತ ಕರೆತರುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಆಗಬೇಕಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗದಂತೆ ನೋಡಿಕೊಂಡು ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ಸಮಾನ ಅವಕಾಶ ನೀಡಿದಲ್ಲಿ ಕಾಂಗ್ರೆಸ್ಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಮುಂದಿಟ್ಟು ಹೈಕಮಾಂಡ್ ಭೇಟಿ ಮಾಡಲು ನಾಯಕರು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರತಿಷ್ಠೆಯ ವಿಚಾರವಾಗಿದೆ. ಎಡಗೈ ಹಾಗೂ ಬಲಗೈ ಸಮುದಾಯ ಒಟ್ಟಾಗಿ ಸಾಗಲು ಇತ್ತೀಚೆಗೆ ನಡೆದ ಮುಖಂಡರ ಸಭೆಯಲ್ಲೂ ನಿರ್ಧರಿಸಲಾಗಿದೆ. ಹೀಗಾಗಿ, ನಾವು ಹೈಕಮಾಂಡ್ ಮುಂದೆ ಇಂತದ್ದೊಂದು ಬೇಡಿಕೆ ಇಡಲು ಮುಂದಾಗಿದ್ದೇವೆ ಎಂದು ಮಾಜಿ ಸಚಿವರೊಬ್ಬರು ಹೇಳಿದ್ದಾರೆ.
Related Articles
ಬದಲಾವಣೆಗೆ ಬೇಡಿಕೆ: ಪ್ರಸ್ತುತ ಮೀಸಲು ಕ್ಷೇತ್ರಗಳಲ್ಲಿ ಎಡಗೈ ಸಮುದಾಯ ಹೆಚ್ಚಾಗಿರುವ ಕಡೆ ಬಲಗೈ ಹಾಗೂ ಬೋವಿ, ಲಂಬಾಣಿ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಪ್ರತಿ ಚುನಾವಣೆಯಲ್ಲೂ ಎಡಗೈ ಸಮುದಾಯ ಬೇರೊಬ್ಬರಿಗೆ ತ್ಯಾಗ ಮಾಡಬೇಕಾಗಿದೆ. ಈ ಬಾರಿ ಅನ್ಯಾಯಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಮುದಾಯದ ಮುಖಂಡರು ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಎಚ್ಚರಿಕೆ ಸಹ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಉದಾಹರಣೆಗೆ ಪಾವಗಡದಲ್ಲಿ 45 ಸಾವಿರ ಎಡಗೈ ಸಮುದಾಯ ಜನಸಂಖ್ಯೆ ಹೊಂದಿದೆ. ಆದರೆ, ಅಲ್ಲಿ ಬೋವಿ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡುತ್ತಾ ಬಂದಿದೆ. ಈ ಬಾರಿ ಅಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕ್ಷೇತ್ರವಾರು ಸಮುದಾಯದ ಅಂಕಿ-ಸಂಖ್ಯೆ ಆಧಾರವಾಗಿಟ್ಟುಕೊಂಡು ಮೀಸಲು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಆಯಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದಾಗ ಮಾತ್ರ ಯಶಸ್ಸಿಯಾಗಲು ಸಾಧ್ಯ. ಹೈಕಮಾಂಡ್ ತೀರ್ಮಾನ ಎಂದು ಹೇಳಿದರೆ ಈ ಬಾರಿ ಸಮಸ್ಯೆಯಾಗಲಿದೆ ಎಂಬ ಸಂದೇಶ ರವಾನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ನಾಯಕರಿಗೆ ತಲೆನೋವು:
130 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲು ಇತ್ತ ಸಭೆ ನಡೆಯುತ್ತಿರುವಾಗಲೇ ಮೀಸಲು ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರತ್ಯೇಕ ಮಾನದಂಡದಡಿ ಆಗಲಿ ಎಂಬ ಕೂಗು ನಾಯಕರಿಗೂ ತಲೆನೋವು ತಂದಿಟ್ಟಿದೆ. ಕೆಪಿಸಿಸಿಯಿಂದ ಎಐಸಿಸಿಗೆ ಪಟ್ಟಿ ರವಾನೆಯಾದರೂ ದೆಹಲಿ ಮಟ್ಟದಲ್ಲಿ ಮೀಸಲು ಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಪ್ರತ್ಯೇಕ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
– ಎಸ್.ಲಕ್ಷ್ಮಿನಾರಾಯಣ