Advertisement

ರಿಸರ್ವ್‌ ಟ್ಯಾಂಕ್‌ ಆಫ್ ಇಂಡಿಯಾ; ಗೋಲ್ಡ್‌ ರಿಸರ್ವ್‌ ಎಂಬ ಅಭಯ ಹಸ್ತ

07:56 PM Oct 20, 2019 | Sriram |

ಇಂಧನ ಖಾಲಿಯಾಗಿ ಬೈಕ್‌ ನಡುರಸ್ತೆಯಲ್ಲಿ ನಿಲ್ಲುತ್ತದೆ ಎಂದುಕೊಳ್ಳೋಣ. ಸವಾರ ಧೃತಿಗೆಡುವುದಿಲ್ಲ. ಇಂಧನ ಟ್ಯಾಂಕಿನಲ್ಲಿ “ರಿಸರ್ವ್‌’ ರೂಪದಲ್ಲಿ ಒಂದಷ್ಟು ಇಂಧನ ಉಳಿದಿರುತ್ತದೆ. ಕೀಲಿಯನ್ನು ರಿಸರ್ವ್‌ಗೆ ತಿರುಗಿಸಿ ಸವಾರ ಚಾಲನೆ ಮುಂದುವರಿಸುತ್ತಾನೆ. ಯಾವ ರೀತಿ ಇಂಧನ ರಿಸರ್ವ್‌ ಸವಾರನಿಗೆ ಧೈರ್ಯ ತಂದುಕೊಡುತ್ತದೆಯೋ, ಅದೇ ರೀತಿ ಗೋಲ್ಡ್‌ ರಿಸರ್ವ್‌ ದೇಶದ ಆರ್ಥಿಕತೆಗೆ ಅಭಯ ಹಸ್ತ ನೀಡುತ್ತದೆ. ಇತ್ತೀಚಿಗೆ ಬಿಡುಗಡೆಯಾದ ಅತಿ ಹೆಚ್ಚು ಚಿನ್ನದ ರಿಸರ್ವ್‌ ಹೊಂದಿರುವ ಟಾಪ್‌ 10 ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ.

Advertisement

ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕರೆಯುವವರು ನಾವು. ಸರೀಕರ ಮುಂದೆ ಚಿನ್ನಾಭರಣವನ್ನು ಧರಿಸಿ ಮಿಂಚಬೇಕೆಂದು ಅಂದುಕೊಳ್ಳುವವರು ಕೂಡಾ, ಚಿನ್ನವನ್ನು ಪ್ರದರ್ಶನದ ವಸ್ತುವಾಗಿ ನೋಡದೆ ತುರ್ತಿನ ಸಮಯದಲ್ಲಿ ಸಹಾಯಕ್ಕೆ ಬರುತ್ತದೆ ಎಂಬ ಅಚಲ ವಿಶ್ವಾಸದಿಂದಲೇ ಅದನ್ನು ಕೊಂಡಿರುತ್ತಾರೆ. ತನ್ನ ಕುಟುಂಬದ ಸುರಕ್ಷತೆಗಾಗಿ ಮನೆಯ ಯಜಮಾನನೇ ಹೀಗೆ ಯೋಚನೆ ಮಾಡುವಾಗ, ಇಡೀ ದೇಶದ ಆರ್ಥಿಕತೆಯ ವಿಷಯದಲ್ಲಿ ಎಚ್ಚರಿಕೆ ವಹಿಸದಿದ್ದರೆ ಹೇಗೆ? ಈ ದೃಷ್ಟಿಯಿಂದಲೇ ಆಯಾ ದೇಶದ ಸೆಂಟ್ರಲ್‌ ಬ್ಯಾಂಕುಗಳು(ರಿಸರ್ವ್‌ ಬ್ಯಾಂಕ್‌) ಚಿನ್ನವನ್ನು ಗಟ್ಟಿಗಳ ರೂಪದಲ್ಲಿ ದಾಸ್ತಾನು ಮಾಡಿಡುತ್ತವೆ. ಇದನ್ನೇ “ಗೋಲ್ಡ್‌ ರಿಸರ್ವ್‌’ ಎಂದು ಕರೆಯುತ್ತಾರೆ.

ಗೋಲ್ಡ್‌ ರಿಸರ್ವ್‌ ಎಂಬ ಶೂರಿಟಿ
ಇತರೆ ದೇಶಗಳಿಂದ ಆಮದು ಮಾಡಿಕೊಳ್ಳಲು ವೆಚ್ಚ ತಗುಲುತ್ತದೆ. ಯಾವುದೇ ದೇಶದ ಬಳಿ ಮೂರು ತಿಂಗಳ ಆಮದಿಗೆ ಬೇಕಾಗುವಷ್ಟು ಮೊತ್ತ ಮುಂಚಿತವಾಗಿ ಇರಬೇಕಾಗುತ್ತದೆ. ಇದು ಅಲಿಖೀತ ನಿಯಮ. ಇಲ್ಲದೇ ಹೋದರೆ ದೇಶದ ಆರ್ಥಿಕತೆ ಹಳ್ಳ ಹಿಡಿಯುತ್ತಿದೆ ಎಂದರ್ಥ. ಆ ಸಮಯದಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ತುರ್ತಾಗಿ ಕೊಡಬೇಕಿದ್ದವರಿಗೆಲ್ಲಾ ಕೊಟ್ಟು ಆರ್ಥಿಕತೆಯನ್ನು ಬಲಪಡಿಸಬಹುದು. ಆದರೆ ವಿಶ್ವ ಬ್ಯಾಂಕ್‌ ಸುಮ್ಮನೆಯೇ ಸಾಲ ಕೊಡುವುದಿಲ್ಲ. ಅದಕ್ಕೆ ಶೂರಿಟಿ ಕೊಡಬೇಕಾಗುತ್ತದೆ. ಆ ಶೂರಿಟಿಯೇ ಗೋಲ್ಡ್‌ ರಿಸರ್ವ್‌. ದೇಶದ ಬಳಿ ಎಷ್ಟು ಪ್ರಮಾಣದ ಚಿನ್ನ ಗೋಲ್ಡ್‌ ರಿಸರ್ವ್‌ ರೂಪದಲ್ಲಿರುತ್ತದೋ ಅದಕ್ಕೆ ತಕ್ಕಂತೆ ಎಷ್ಟು ಬೇಕಾದರೂ ಸಾಲ ಪಡೆಯಬಹುದು. ನಂತರ ಆರ್ಥಿಕತೆ ಸುಧಾರಣೆಯಾದ ನಂತರ ಪಡೆದ ಸಾಲವನ್ನು ಮರಳಿಸಿ ಅಡವಿಟ್ಟ ಚಿನ್ನವನ್ನು ಹಿಂಪಡೆಯಬಹುದು. ದೇಶದ ಆರ್ಥಿಕತೆ ಹೇಗಿದೆ ಎಂಬುದಕ್ಕೆ ಗೋಲ್ಡ್‌ ರಿಸರ್ವ್‌ ಕನ್ನಡಿ ಹಿಡಿಯುತ್ತದೆ.

ಗೋಲ್ಡ್‌ ರಿಸರ್ವ್‌ನಲ್ಲಿ ಸಂಗ್ರಹಿಸುವ ಚಿನ್ನ ನಾವು ನೀವು ಬಳಸುವ ಚಿನ್ನಾಭರಣಗಳ ರೂಪದಲ್ಲಿಯೋ ಅಥವಾ ಇನ್ಯಾವುದೋ ರೂಪದಲ್ಲಿಯೋ ಇರುವುದಿಲ್ಲ. ಬದಲಾಗಿ ಚಿನ್ನದ ಗಟ್ಟಿಗಳ ರೂಪದಲ್ಲಿರುತ್ತದೆ. ಈ ಚಿನ್ನದ ಗಟ್ಟಿಗಳು ಸಾಮಾನ್ಯ ಅಂಗಡಿ, ಮಳಿಗೆಗಳಲ್ಲಿ ಸಿಗುವುದಿಲ್ಲ. ಅದಕ್ಕೆಂದೇ ಮೀಸಲಾದ ಬುಲಿಯನ್‌ ಮಾರ್ಕೆಟ್‌ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇಲ್ಲೊಂದು ವಿಷಯವನ್ನು ಗಮನದಲ್ಲಿರಿಸಿಕೊಳ್ಳಬೇಕು. ಹೆಚ್ಚು ಗೋಲ್ಡ್‌ ರಿಸರ್ವ್‌ ಹೊಂದಿದ ದೇಶ ಹೆಚ್ಚು ಶ್ರೀಮಂತ ಎಂದೇನಲ್ಲ. ಸಾಮಾನ್ಯವಾಗಿ ತನ್ನ ಬಳಿ ಎಷ್ಟು ಸಾಲ ಇದೆಯೋ ಅಷ್ಟೇ ಮೊತ್ತ ಚಿನ್ನದ ರಿಸರ್ವ್‌ಅನ್ನು ದೇಶಗಳು ಹೊಂದಿರುತ್ತವೆ. ನೂರಕ್ಕೆ ನೂರು ಪ್ರತಿಶತ ಪ್ರಕರಣಗಳಲ್ಲಿ ಹಾಗಿಲ್ಲದೇ ಇದ್ದರೂ, ಚಿನ್ನದ ರಿಸರ್ವ್‌ ಮತ್ತು ಸಾಲದ ಪ್ರಮಾಣ ಎರಡೂ ಒಂದಕ್ಕೊಂದು ಪೂರಕ ಎನ್ನುವುದು ನಿಜ.

ಅಂತಾರಾಷ್ಟ್ರೀಯ ಮಾನದಂಡವಿದೆ
ಪ್ರಾಚೀನ ನಾಗರಿಕತೆಗಳನ್ನು ಗಮನಿಸಿದರೆ ಅಲ್ಲೆಲ್ಲಾ ಚಿನ್ನವನ್ನು ಹಣದಂತೆ ಚಲಾಯಿಸಿದ ನಿದರ್ಶನಗಳು ಸಿಗುತ್ತವೆ. ಇಂದು ಈ ಹಳದಿ ಲೋಹವನ್ನು ಹಣದಂತೆ ಬಳಸುತ್ತಿಲ್ಲ ನಿಜ. ಅದರ ಬದಲಾಗಿ, ಹಣದ ನೋಟುಗಳನ್ನು ನಾವೆಲ್ಲರೂ ಬಳಸುತ್ತಿದ್ದೇವೆ. ಅಚ್ಚರಿ ಎಂದರೆ, ಕರೆನ್ಸಿಯ ಮೌಲ್ಯದ ಮೇಲೆ ಚಿನ್ನದ ಪ್ರಭಾವವಂತೂ ಹೋಗಿಲ್ಲ. ಇದ್ದೇ ಇದೆ. ಈ ಹಳದಿ ಲೋಹವನ್ನು ಎಲ್ಲಾ ದೇಶಗಳೂ ಒಪ್ಪಿ ಮಾನದಂಡವನ್ನಾಗಿ ಪರಿಗಣಿಸಿದ್ದು ಸುಮ್ಮನೆಯೇ ಅಲ್ಲ. ಅದರ ರಾಸಾಯನಿಕ ಗುಣಗಳಿಂದಾಗಿ ಯಾವುದೇ ಪರಿಸರಕ್ಕೂ ಅದು ಹಾಳಾಗದೇ ಉಳಿಯುವುದರಿಂದ ಅನಾದಿ ಕಾಲದಿಂದಲೂ ಅನಧಿಕೃತವಾಗಿ ಚಿನ್ನವನ್ನು ಆರ್ಥಿಕತೆಯ ಮಾನದಂಡವಾಗಿ ಸ್ವೀಕರಿಸಲಾಗಿದೆ. ಅಂದ ಹಾಗೆ ರಿಸರ್ವ್‌ ಹೆಚ್ಚಿಸಿಕೊಳ್ಳಲು ಬೇಕಾಬಿಟ್ಟಿ ಚಿನ್ನ ಖರೀದಿಸಲೂ ಆಗುವುದಿಲ್ಲ. ಅದಕ್ಕೆಂದೇ ಅಂತಾರಾಷ್ಟ್ರೀಯ ಮಾನದಂಡವಿದೆ. ಅದಕ್ಕೆ ಅನುಗುಣವಾಗಿ ಆಯಾ ದೇಶಗಳ ರಿಸರ್ವ್‌ ಬ್ಯಾಂಕುಗಳು ತಮಗೆ ಬೇಕಾದ ಹಾಗೆ ಕೊಂಚ ಮಾರ್ಪಾಡು ಮಾಡಿಕೊಳ್ಳಬಹುದು.

Advertisement

ಭಾರತ ಚಿನ್ನವನ್ನು ಅಡ ಇಟ್ಟಿದ್ದು
90ರ ದಶಕದಲ್ಲಿ ಭಾರತ ಕಂಡ ಆರ್ಥಿಕ ಕುಸಿತ ನಾವ್ಯಾರೂ ಮರೆಯಲಾಗದಂಥದ್ದು. ಕುಸಿತ 1985ರಲ್ಲೇ ಶುರುವಾಗಿತ್ತು. ಯಾವುದೇ ಸರಕನ್ನು ಆಮದು ಮಾಡಿಕೊಳ್ಳಲು ಆಗದ ಸ್ಥಿತಿಯನ್ನು ಭಾರತ ತಲುಪಿತ್ತು. ಗಾಯದ ಮೇಲೆ ಬರೆ ಎಳೆದಂತೆ, 1990ರಲ್ಲಿ ನಡೆಯ ಗಲ್ಫ್ ಯುದ್ಧ ಭಾರತದ ಸಂಕಷ್ಟವನ್ನು ಹೆಚ್ಚಿಸಿತು. ಇಂಧನವನ್ನು ದುಪ್ಪಟ್ಟು ಬೆಲೆಗೆ ಕೊಳ್ಳಬೇಕಾಗಿ ಬಂದಿತ್ತು. ಆಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಿ, ಭಾರತದ ಮೇಲೆ ದಿಗ್ಬಂಧನ ಹೇರುವ ಪರಿಸ್ಥಿತಿ ಬಂದಾಗ ನಮ್ಮ ಚಿನ್ನದ ರಿಸರ್ವ್‌ಅನ್ನು ಮಾರಬೇಕಾದ ದುಸ್ಥಿತಿ ಬಂದಿತ್ತು. ಆ ಸಮಯದಲ್ಲೇ ವರ್ಲ್ಡ್ ಬ್ಯಾಂಕ್‌ನಲ್ಲಿ ನಮ್ಮ ಚಿನ್ನವನ್ನು ಅಡ ಇಟ್ಟು 15,000 ಕೋಟಿಯಷ್ಟು ಹಣವನ್ನು ಸಾಲ ಪಡೆಯಲಾಗಿತ್ತು. ಆಗ ಭಾರತದ ಪ್ರಧಾನಿಯಾಗಿದ್ದವರು ಚಂದ್ರಶೇಖರ್‌. ಈ ಘಟನೆಯ ನಂತರ ನಡೆದ ಚುನಾವಣೆಯಲ್ಲಿ ಅವರು ಸೋತರು. ಪ್ರಧಾನಿ ಹುದ್ದೆಗೆ ಏರಿದವರು ಪಿ.ವಿ. ನರಸಿಂಹ ರಾವ್‌, ವಿತ್ತ ಮಂತ್ರಿಯಾಗಿ ಬಂದವರು ಮನಮನೋಹನ ಸಿಂಗ್‌. ಅವರಿಬ್ಬರ ನೇತೃತ್ವದಲ್ಲಿ ಅನೇಕ ಆರ್ಥಿಕ ಸುಧಾರಣಾ ನೀತಿಗಳನ್ನು ಕೈಗೊಳ್ಳಲಾಯಿತು. ವರ್ಲ್ಡ್ ಬ್ಯಾಂಕ್‌ನಿಂದ ಸಾಲ ಪಡೆದಾಗ ಕೆಲ ಶರತ್ತುಗಳಿಗೆ ಭಾರತ ಒಪ್ಪಿಗೆ ಸೂಚಿಸಿತ್ತು. ಅದರಲ್ಲೊಂದು ಭಾರತ ಆರ್ಥಿಕ ಉದಾರೀಕರಣ ನೀತಿಯನ್ನು ಅಳವಡಿಸಿಕೊಳ್ಳುವುದು! ಹೀಗೆ ಭಾರತ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತೆರೆದುಕೊಂಡಿತು. ಇದರಿಂದಾಗಿ ವಿದೇಶಿ ಮೂಲಗಳಿಂದಾಗಿ ಹಣದ ಒಳಹರಿವು ಹೆಚ್ಚಿ ಭಾರತದ ಆರ್ಥಿಕತೆ ಸುಧಾರಣೆಯ ಹಾದಿ ಹಿಡಿಯಿತು. ಅಲ್ಲದೆ ಇದೇ ಅವಧಿಯಲ್ಲಿ ಸಾಲವನ್ನು ಮರಳಿಸಿ, ಅಡವಿಟ್ಟಿದ್ದ ಚಿನ್ನವನ್ನು ಹಿಂಪಡೆಯಲಾಯಿತು. 1991ಲ್ಲಿದ್ದ ಭಾರತದ ಜಿಡಿಪಿಗೆ ಹೋಲಿಸಿದರೆ ಇವಾಗಿನ ಜಿಡಿಪಿ 1100% ಹೆಚ್ಚಿದೆ!

ಟಾಪ್‌10 ದೇಶಗಳು
1. ಅಮೆರಿಕ 8,134 (ಟನ್‌ಗಳಲ್ಲಿ)
2. ಜರ್ಮನಿ 3,367
3. ಇಟಲಿ 2,452
4. ಫ್ರಾನ್ಸ್‌ 2,436
5. ರಷ್ಯಾ 2,219
6. ಚೀನಾ 1,937
7. ಸ್ವಿಟlರ್‌ಲ್ಯಾಂಡ್‌ 1,040
8. ಜಪಾನ್‌ 765
9. ಭಾರತ 618.2
10. ನೆದರ್‌ಲೆಂಡ್ಸ್‌ 613

Advertisement

Udayavani is now on Telegram. Click here to join our channel and stay updated with the latest news.

Next