Advertisement

Census: ವೈಜ್ಞಾನಿಕ ದತ್ತಾಂಶದಿಂದ ಮೀಸಲು ಸಾಧ್ಯ: ಕಾಂತರಾಜ್‌

11:56 PM Dec 01, 2023 | Team Udayavani |

ಬೆಂಗಳೂರು: ಸಾಮಾಜಿಕ ನ್ಯಾಯಕ್ಕಾಗಿ ಜಾತಿಗಣತಿ ಹಾಗೂ ಸಮೀಕ್ಷೆಗಳ ಅಗತ್ಯವಿದೆ. ಇದರ ವೈಜ್ಞಾನಿಕ ದತ್ತಾಂಶಗಳನ್ನು ಸುಪ್ರೀಂಕೋರ್ಟ್‌ ಮುಂದಿಟ್ಟು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌.ಕಾಂತರಾಜ್‌ ಹೇಳಿದರು.

Advertisement

ಶುಕ್ರವಾರ ನಗರದ ಅರಕೇರಿ ಸಭಾಂಗಣದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಐಎಚ್‌ಎಸ್‌ ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಂಡ “ಗವಿಮಾರ್ಗ’ ಪುಸ್ತಕ ಬಿಡುಗಡೆ, ವಿ.ಪಿ.ಸಿಂಗ್‌ ಪ್ರಶಸ್ತಿ ಪ್ರದಾನ ಮತ್ತು “ಮಂಡಲ್‌ ವರದಿ ಆಗಿದ್ದೇನು?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಂವಿಧಾನ ಜಾರಿಯಾಗಿ 42 ವರ್ಷ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ. ವಿ.ಪಿ. ಸಿಂಗ್‌ ಅವರು ಮಂಡಲ್‌ ವರದಿ ಜಾರಿ ಮಾಡಿದ್ದರಿಂದ ಹಿಂದುಳಿದ ವರ್ಗಕ್ಕೆ ಶೇ. 27 ಮೀಸಲಾತಿ ಸಿಕ್ಕಿದ್ದರೂ ಬಳಕೆಯಾಗಿರುವುದು ಶೇ. 5ರಿಂದ 6ರಷ್ಟು ಮಾತ್ರ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳಿಗೆ 1992 ರಲ್ಲಿ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿತ್ತು. 2008ರಲ್ಲಿ ಶಿಕ್ಷಣದಲ್ಲೂ ಮೀಸಲಾತಿ ನೀಡಲಾ ಯಿತು. ಶೇ.27ರಷ್ಟು ಮೀಸಲಾತಿ ಪರಿಣಾಮಕಾರಿಯಾಗಿ ಜಾರಿಯಾಗು ವಂತೆ ಮೊದಲು ನೋಡಿಕೊಳ್ಳಬೇಕು. ಅನಂತರ ಈ ಮೀಸಲಾತಿ ಜನ ಸಂಖ್ಯೆಗೆ ಅನುಗುಣವಾಗಿದೆಯೇ ಎಂದು ನೋಡಬೇಕು. ಅದು ಗೊತ್ತಾಗಬೇಕಾದರೆ ಜನಗಣತಿ, ಸಮೀಕ್ಷೆಗಳನ್ನು ಮಾಡಬೇಕು ಎಂದರು.

ಹಿರಿಯೂರು ಆದಿಜಾಂಭವ ಬೃಹನ್ಮಠದ ಷಡಕ್ಷರಿ ಮುನಿ ದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, 1931ರಲ್ಲಿ ಜಾತಿಗಣತಿ ಬಳಿಕ ಯಾವುದೇ ಗಣತಿಯಾಗಿಲ್ಲ. ಎಲ್ಲ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಕಾಂತರಾಜು ಆಯೋಗ ತಯಾರಿಸಿದ ವರದಿಯನ್ನು ಬಿಚ್ಚಲು ಬಿಡುತ್ತಿಲ್ಲ. ಸಮಾಜದಲ್ಲಿ ಶೋಷಣೆಗೊಳಗಾದವರು, ಹಿಂದುಳಿದವರು ವರದಿ ಬಿಡುಗಡೆ ಮಾಡಿ ಎಂದರೆ ಬಲಿಷ್ಠರು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement

ಪ್ರಶಸ್ತಿ ಪ್ರದಾನ
ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ ಪುಸ್ತಕ ಬಿಡುಗಡೆ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ದರಾಜು, ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ, ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಮೊದಲಿಯಾರ್‌, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌, ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಗೌರವಾಧ್ಯಕ್ಷ ಬಿ.ಕೆ. ರವಿ ಅವರಿಗೆ ವಿ.ಪಿ.ಸಿಂಗ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌, ಮಾಜಿ ಸಚಿವ ಎಚ್‌. ಆಂಜನೇಯ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next