ಮೀಸಲಾತಿ ಮಿತಿ ಹೆಚ್ಚಿಸುವ ವಿಚಾರದಲ್ಲಿ ರಾಜ್ಯಗಳಿಗೆ ಅಧಿಕಾರವಿಲ್ಲ. ಇಲ್ಲಿ ರಾಷ್ಟ್ರಪತಿ ಹಾಗೂ ಸಂಸತ್ತಿಗೆ ಸಂಪೂರ್ಣ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರವಷ್ಟೇ ತೀರ್ಪು ನೀಡಿದೆ. ಮರಾಠಿ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದು ಪಡಿಸಿ, ಈ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಜತೆಗೆ ಮರಾಠಿ ಸಮುದಾಯಕ್ಕೆ ಏಕೆ ಮೀಸಲಾತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸುವಲ್ಲಿ ಮಹಾರಾಷ್ಟ್ರ ಸರಕಾರ ವಿಫಲವಾಗಿದೆ ಎಂಬುದು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ.
ಮಹಾರಾಷ್ಟ್ರದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಒಪ್ಪಬಹುದು. ಏಕೆಂದರೆ ಸರಕಾರ ಮರಾಠಿ ಸಮುದಾಯ ಹಿಂದುಳಿದಿದೆ ಎಂದು ಸಾಬೀತು ಮಾಡುವಲ್ಲಿ ವಿಫಲವಾಗಿರಬಹುದು. ಜತೆಗೆ ಮೀಸಲಾತಿ ನೀಡುವ ತನ್ನ ನಿರ್ಧಾರ ಎಷ್ಟು ಸರಿ ಎಂಬ ಬಗ್ಗೆ ಸಮರ್ಥ ವಾದ ಮಂಡಿಸುವಲ್ಲಿ ಎಡವಿರಬಹುದು. ಆದರೆ ಇದೇ ಮೀಸಲಾತಿ ನಿಗದಿ ವಿಚಾರದಲ್ಲಿ ರಾಜ್ಯ ಸರಕಾರಗಳು ಶೇ.50ಕ್ಕಿಂತ ಹೆಚ್ಚು ಮೀಸಲು ನಿಗದಿ ಮಾಡುವಂತಿಲ್ಲ. ಇಲ್ಲಿ ಕೇಂದ್ರ ಸರಕಾರವೇ ನಿಗದಿ ಮಾಡಬೇಕು ಎಂದು ಹೇಳಿರುವುದು ಮಾತ್ರ ರಾಜ್ಯಗಳ ಅಧಿಕಾರಕ್ಕೆ ಭಂಗ ತಂದಂತಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಏಕೆಂದರೆ ರಾಜ್ಯಗಳಿಗೆ ಮಾತ್ರ ತನ್ನ ಪ್ರಜೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಗೊತ್ತಿರುತ್ತದೆ. ಪ್ರತಿಯೊಂದು ಬಾರಿಯೂ ರಾಜ್ಯ ಸರಕಾರಗಳು ಯಾವುದೋ ಒಂದು ಸಮುದಾಯಕ್ಕೆ ಅನ್ಯಾಯವಾಗಿದೆ, ಇದಕ್ಕೆ ನ್ಯಾಯ ಸಿಗಬೇಕು ಎಂದಾದರೆ ಮೀಸಲಾತಿ ನೀಡಬೇಕು. ಈ ಬಗ್ಗೆ ಗಮನ ಹರಿಸಿ ಎಂದು ಪದೇ ಪದೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಬೇಕು. ಈ ಮನವಿ ಬಗ್ಗೆ ಕೇಂದ್ರ ಸರಕಾರ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ ಬಹಳಷ್ಟು ಸಮಯ ಕಳೆದು ಹೋಗಿರುತ್ತದೆ. ಹೀಗಾಗಿ ಮೀಸಲಾತಿ ಹೆಚ್ಚಿಸುವ ನಿರ್ಧಾರ ರಾಜ್ಯಗಳ ಬಳಿ ಇದ್ದರೆ ಒಳಿತು.
ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕಾನೂನು ಹೋರಾಟ ಮುಂದುವರಿಸುವ ಅಗತ್ಯವಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಮೀಸಲು ಹೆಚ್ಚಿಸುವ ಅಧಿಕಾರ ಯಾರಲ್ಲಿರಬೇಕು ಎಂಬ ಅಭಿಪ್ರಾಯ ಕೇಳಿದಾಗ, ಕರ್ನಾಟಕವೂ ರಾಜ್ಯಗಳ ಬಳಿಯೇ ಇರಲಿ ಎಂದು ವಾದಿಸಿತ್ತು. ಇದೇ ವಾದವನ್ನು ಮುಂದಿಟ್ಟುಕೊಂಡು, ಮುಂದೆಯೂ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಸಮರ ಮುಂದುವರಿಸಬೇಕು. ಜತೆಗೆ ಮಂಡಲ್ ತೀರ್ಪಿನ ಮರುಪರಿಶೀಲನೆ ಸಂಬಂಧವೂ ರಾಜ್ಯ ಸರಕಾರ ಕಾನೂನು ಹೋರಾಟ ಮುಂದುವರಿಸಬಹುದು. ಏಕೆಂದರೆ ಸದ್ಯ ನೀಡಲಾಗಿರುವ ಮೀಸಲಾತಿ, ಬಹಳಷ್ಟು ಹಿಂದಿನ ಜಾತಿ ಗಣತಿ ವರದಿ ಆಧರಿಸಿ ನೀಡಿದಂಥದ್ದು. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಹೊಸದಾಗಿ ಜಾತಿಗಣತಿ ಮಾಡಿ ಮೀಸಲಾತಿಯನ್ನು ಪರಿಷ್ಕರಿಸಬಹುದು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮನಸ್ಸು ಮಾಡಬೇಕಷ್ಟೇ.
ಈಗಾಗಲೇ ಮೀಸಲಾತಿ ಹೋರಾಟ ಸಂಬಂಧ ಮೂರ್ನಾಲ್ಕು ಸಮುದಾಯಗಳಿಗೆ ಮೀಸಲಾತಿ ನೀಡುವ ಅಥವಾ ಮೀಸಲು ಬದಲಿಸುವ ಬಗ್ಗೆ ಕರ್ನಾಟಕ ಸರಕಾರ ಭರವಸೆ ನೀಡಿದೆ. ಜತೆಗೆ ಇದರ ಅಧ್ಯಯನಕ್ಕಾಗಿ ಸಮಿತಿಗಳನ್ನೂ ರಚಿಸಿದೆ. ಈ ಸಮಿತಿಗಳ ಶಿಫಾರಸಿನ ಅನ್ವಯ ಮೀಸಲು ನೀಡಲು ರಾಜ್ಯ ಸರಕಾರ ಮತ್ತೆ ಕೇಂದ್ರ ಸರಕಾರದ ಬಾಗಿಲಿಗೇ ಹೋಗಬೇಕು. ಈ ಪ್ರಕ್ರಿಯೆ ಬಹಳಷ್ಟು ದಿನ ಹಿಡಿಯುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ ತ್ವರಿತಗತಿಯಲ್ಲಿ ರಾಜ್ಯ ಸರಕಾರ ನಿರ್ಧಾರಕ್ಕೆ ಬರಬೇಕು.