ಕಲಬುರಗಿ: ಬಡ್ತಿ ಮೀಸಲಾತಿ ಹಕ್ಕಿನಿಂದ ವಂಚನೆಗೊಳಿಸಿರುವ ಸುಪ್ರಿಂಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರಕಾರವು ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಬಡ್ತಿ ಮೀಸಲಾತಿ ಹೋರಾಟ ಜಿಲ್ಲಾ ಸಮನ್ವಯ ಸಮಿತಿ ನೇತೃತ್ವದಲ್ಲಿ ಡಾ| ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋತ್ಛ ನ್ಯಾಯಾಲಯದ ತೀರ್ಪು ದಲಿತ ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಲ್ಲಿ ಸಂಪೂರ್ಣ ವಿಫಲವಾಗಲಿದೆ. ಅಲ್ಲದೇ ಈ ತೀರ್ಪು ದಲಿತ ನೌಕರರಿಗೆ ಮತ್ತಷ್ಟು ಅನ್ಯಾಯ ಮಾಡಿದೆ.
ಆದ್ದರಿಂದ ಕರ್ನಾಟಕ ಸರಕಾರ ದಲಿತ ನೌಕರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಅಂಕಿ, ಅಂಶಗಳ ಮೂಲಕ ವಾದಿಸಿದ್ದರೆ ಈ ರೀತಿಯ ಅನ್ಯಾಯ ಆಗುತ್ತಿರಲಿಲ್ಲ. ರಾಜ್ಯ ವಕೀಲರು ಸರಿಯಾದ ದಾಖಲೆ ಮಂಡಿಸಿಲ್ಲ, ಇದರಿಂದಾಗಿ ಇವತ್ತು ದಲಿತ ನೌಕರರ ಮೇಲೆ ಮರಣ ಶಾಸನ ಹೇರಲಾಗಿದೆ ಎಂದು ದೂರಿದರು.
ಕೂಡಲೇ ಪವಿತ್ರಾ ಮತ್ತಿತರರು ಸಲ್ಲಿಸಿರುವ ಮೇಲ್ಮವಿಗೆ ಸಮರ್ಪಕ ಉತ್ತರವನ್ನಾದರೂ ನೀಡಬೇಕು.ಅಲ್ಲದೆ, ದಲಿತ ನೌಕರರ ಮೀಸಲಾತಿ ಕೋಟಾ ಹೊರತುಪಡಿಸಿ ಸಾಮಾನ್ಯ ಕೋಟಾದಡಿ ಆಯ್ಕೆಯಾದ ದಲಿತರಿಗೂ ಮೀಸಲಾತಿ ಕೋಟಾದಲ್ಲಿ ಸೇರಿಸುವ ತಪ್ಪು ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ಈ ತಪ್ಪು ಕ್ರಮಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಸುರೇಶ ಶರ್ಮಾ, ಅಧ್ಯಕ್ಷ ಬಸವರಾಜ ಭಾಗೋಡಿ, ಕಾರ್ಯಾಧ್ಯಕ್ಷ ಸೋಮಶೇಖರ ಎಸ್. ಮದನಕರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದಾನಿ ಗಣ್ಯರಾದ ಸಾಯಬಣ್ಣ ಹೋಳಕರ್, ಚಂದ್ರಾಮಪ್ಪ ಹುಬ್ಬಳ್ಳಿ, ದೇವಣ್ಣ ಕಟ್ಟಿ, ಬಾಬು ಮೋರೆ, ಖಜಾಂಚಿ ವಿಠಲ್ ಎಸ್. ಗೋಳಾ ಮುಂತಾದವರ ನೇತೃತ್ವದಲ್ಲಿ ನೂರಾರು ದಲಿತ ನೌಕರರು ಪಾಲ್ಗೊಂಡಿದ್ದರು.