Advertisement
ಮೀಸಲು ಬಡ್ತಿ ವಿವಾದ ಕುರಿತ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಆ. 14ರಂದು ವಿಚಾರಣೆಗೆ ಬರಲಿದ್ದು, ಅದಕ್ಕೆ ಮುನ್ನವೇ ಈ ಕುರಿತು ಮಧ್ಯಂತರ ಅರ್ಜಿ ಸಲ್ಲಿಸಿ, ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೇ ಹಿಂಬಡ್ತಿಗೆ ಒಳಗಾಗಿರುವ ಮೀಸಲು ಪಡ್ತಿ ಪಡೆದಿದ್ದ ನೌಕರರಿಗೆ ಮತ್ತೆ ಬಡ್ತಿಗೆ ಅವಕಾಶ ನೀಡುವಂತೆ ಕೋರಲು ಬುಧವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮೀಸಲು ಬಡ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ಕುರಿತಂತೆ ಸಭೆಗೆ ಮಾಹಿತಿ ನೀಡಿದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಆಧಾರದ ಮೇಲೆ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ ಕುರಿತು ಯತಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಮೌಖೀಕ ಸೂಚನೆ ನೀಡಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆಯಲ್ಲಿದ್ದ ಸಚಿವರು, ಸರ್ಕಾರಿ ನೌಕರರ ವಿಚಾರಗಳಿಗೆ ಮೌಖೀಕ ಆದೇಶ ಅನ್ವಯವಾಗುವುದಿಲ್ಲ. ಹೀಗಾಗಿ ಕಾಯ್ದೆ ಜಾರಿಗೊಳಿಸಲು ಅಡ್ಡಿಯಿಲ್ಲ ಎಂದು ಹೇಳಿದರು.
Related Articles
Advertisement
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್‌ನಲ್ಲಿ ಆ. 14ರಂದು ಏನಾಗುತ್ತದೆ ಎಂದು ಕಾದು ನೋಡೋಣ. ಅದರ ಜತೆಗೆ ರಾಷ್ಟ್ರಪತಿಗಳ ಅಂಕಿತ ದೊರೆತು ಸಿದ್ಧವಾದ ಬಡ್ತಿ ಮೀಸಲು ಉಳಿಸಿಕೊಳ್ಳು ಕಾಯ್ದೆ ಜಾರಿ ಕುರಿತಂತೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವರ್ಗಾವಣೆ ತಡೆ ಅಸಾಧ್ಯ:ಈ ಮಧ್ಯೆ ಮೀಸಲು ಬಡ್ತಿ ವಿವಾದ ಬಗೆಹರಿಯುವವರೆಗೆ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಇಲ್ಲವಾದರೆ ಮುಂದೆ ಸಮಸ್ಯೆ ಎದುರಾಗಬಹುದು ಎಂದು ಸಭೆಯಲ್ಲಿದ್ದ ಬಹುತೇಕ ಸದಸ್ಯರು ಒತ್ತಾಯಿಸಿದರು. ಆದರೆ, ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ನಿರಾಕರಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆಡಳಿತದ ದೃಷ್ಟಿಯಿಂದ ಈ ತೀರ್ಮಾನ ಅಸಾಧ್ಯ. ವಿವಾದ ಬಗೆಹರಿದ ಬಳಿಕ ಮುಂದಿನ ಯೋಚನೆ ಮಾಡೋಣ ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಎನ್.ಮಹೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ದಲಿತ ಸಂಘಟನೆಗಳ ಪ್ರತಿನಿಧಿಗಳು ಇದ್ದರು.