ಮಹಾನಗರ: ಮಹಾನಗರ ಪಾಲಿಕೆ ಚುನಾವಣೆಗೆ ಘೋಷಣೆಯಾಗಿರುವ ಮೀಸಲಾತಿಯ ಪ್ರಕಾರ ತಮ್ಮದೇ ವಾರ್ಡ್‌ನಲ್ಲಿ ಸ್ಪರ್ಧಿಸಲು ಕಳೆದ ಬಾರಿಯ ಕೇವಲ ಸುಮಾರು 25 ಸದಸ್ಯರಿಗೆ ಮಾತ್ರ ಅವಕಾಶ ಲಭಿಸಲಿದೆ.
ಕಳೆದ ಬಾರಿಯ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಕಾಂಗ್ರೆಸ್‌ನ 35 ಸದಸ್ಯರ ಪೈಕಿ 20 ಸದಸ್ಯರಿಗೆ ಈ ಬಾರಿಯ ಚುನಾವಣೆಯಲ್ಲಿ ತಮ್ಮದೇ ವಾರ್ಡ್‌ನಲ್ಲಿ ಸ್ಪರ್ಧಿಸಲು ಅವಕಾಶವಿದ್ದರೆ, ಬಿಜೆಪಿಯ 20 ಸದಸ್ಯರ ಪೈಕಿ ಕೇವಲ 5 ಸದಸ್ಯರಿಗೆ ಮಾತ್ರ ತಮ್ಮದೇ ವಾರ್ಡ್‌ನಲ್ಲಿ ಸ್ಪರ್ಧಿಸಲು ಅವಕಾಶವಿದೆ.
ಕಾಂಗ್ರೆಸ್‌ನ ಭಾಸ್ಕರ್ ಕೆ., ಮಹಾಬಲ ಮಾರ್ಲ, ಹರಿನಾಥ್, ಜೆಸಿಂತ ವಿಜಯ ಆಲ್ಫೆ†ಡ್, ಕವಿತಾ ಸನಿಲ್, ಲ್ಯಾನ್ಸಿ ಲಾಟ್ ಪಿಂಟೋ, ನವೀನ್ ಡಿ’ಸೋಜಾ, ಅಬ್ದುಲ್ ರವೂಫ್, ಲತೀಫ್, ಮೊಹಮ್ಮದ್, ಪ್ರಕಾಶ್ ಸಾಲ್ಯಾನ್, ಅಶೋಕ್ ಡಿ.ಕೆ., ಸಬಿತಾ ಮಿಸ್ಕಿತ್, ಅಪ್ಪಿ, ರತಿಕಲಾ, ಕವಿತಾವಾಸು, ಕೇಶವ ಮರೋಳಿ, ರಜನೀಶ್, ಪ್ರವೀಣ್‌ಚಂದ್ರ ಆಳ್ವ, ಎ.ಸಿ. ವಿನಯ್‌ರಾಜ್, ಬಶೀರ್ ಅಹಮದ್ ಅವರಿಗೆ ತಮ್ಮದೇ ವಾರ್ಡ್ ನಲ್ಲಿ ಸ್ಪರ್ಧಿಸಲು ಅನುಕೂಲವಾಗುವ ಮೀಸಲಾತಿ ಇದೆ. ಇವರಲ್ಲಿ ಯಾರಿಗೆಲ್ಲ ಮತ್ತೆ ಸ್ಪರ್ಧಿಸುವ ಅವಕಾಶವನ್ನು ಕಾಂಗ್ರೆಸ್ ನೀಡಲಿದೆ ಎಂಬುದು ವಾರಾಂತ್ಯದಲ್ಲಿ ಸ್ಪಷ್ಟವಾಗಲಿದೆ.
ಇನ್ನು ಬಿಜೆಪಿಯಿಂದ ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ಹೇಮಲತಾ ಸಾಲ್ಯಾನ್, ಜಯಂತಿ ಆಚಾರ್ ಅವರಿಗೆ ತಮ್ಮದೇ ವಾರ್ಡ್‌ನಲ್ಲಿ ಸ್ಪರ್ಧಿಸುವ ಅವಕಾಶವಿದ್ದು, ಪಕ್ಷ ಈ ಬಗ್ಗೆ ಅಂತಿಮ ತೀರ್ಮಾನವನ್ನು ಇನ್ನಷ್ಟೇ ಕೈಗೊಳ್ಳ ಬೇಕಿದೆ.
ಉಳಿದಂತೆ ಪಾಲಿಕೆಯ ಕಾಂಗ್ರೆಸ್‌ನ ಮಾಜಿ ಸದಸ್ಯರಾದ ಎಂ. ಶಶಿಧರ ಹೆಗ್ಡೆ, ದೀಪಕ್ ಪೂಜಾರಿ, ಅಶೋಕ್ ಶೆಟ್ಟಿ, ಪ್ರತಿಭಾ ಕುಳಾಯಿ, ಪುರುಷೋತ್ತಮ ಚಿತ್ರಾಪುರ, ಬಿಜೆಪಿಯ ಗಣೇಶ್ ಹೊಸಬೆಟ್ಟು, ಸುಧೀರ್ ಶೆಟ್ಟಿ ಕಣ್ಣೂರು, ತಿಲಕ್‌ರಾಜ್, ನವೀನ್‌ಚಂದ್ರ ಸಹಿತ ಇನ್ನೂ ಹಲವರ ಕ್ಷೇತ್ರಗಳ ಮೀಸಲಾತಿಯಲ್ಲಿ ಅದಲು ಬದಲಾದ ಹಿನ್ನೆಲೆಯಲ್ಲಿ ಇತರ ವಾರ್ಡ್‌ಗಳತ್ತ ಇವರೆಲ್ಲ ಕಣ್ಣಿಟ್ಟಿದ್ದಾರೆ. ಹೀಗಾಗಿ ಯಾರಿಗೆ ಪಕ್ಷವು ಕೃಪಾಕಟಾಕ್ಷ ತೋರಲಿದೆ ಎಂಬುದು ಕೆಲವೇ ದಿನದಲ್ಲಿ ಅಂತಿಮಗೊಳ್ಳಲಿದೆ.
ಪುರುಷ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನ
ಶೇ. 50ರಷ್ಟು ಮಹಿಳೆಯರಿಗೆ ಅವಕಾಶ ಇರುವ ಕಾರಣದಿಂದ ಸಾಮಾನ್ಯ ಮೀಸಲಾತಿ ವಾರ್ಡ್‌ಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಪಕ್ಷಗಳುಚಿಂತಿಸುತ್ತಿವೆ.
3 ದಿನಗಳೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿ
ಪಾಲಿಕೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯೂ ಚುರುಕುಗೊಂಡಿದೆ. ಕಾಂಗ್ರೆಸ್‌ನಿಂದ ಈಗಾಗಲೇ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, 60 ವಾರ್ಡ್‌ಗಳಿಗೆ ಬರೋಬ್ಬರಿ 160ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಶನಿವಾರದೊಳಗೆ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಿಜೆಪಿಯಿಂದ ವಾರ್ಡ್‌ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಯುತ್ತಿದ್ದು, ಅಲ್ಲಿ ಅಭ್ಯರ್ಥಿ ಆಯ್ಕೆ ಜರಗಲಿದೆ. ಅದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳ್ಳಲಿದ್ದು, ಶನಿವಾರದೊಳಗೆ ಬಿಜೆಪಿಯ ಮೊದಲ ಪಟ್ಟಿಯೂ ಬಿಡುಗಡೆಯಾಗುವ ನಿರೀಕ್ಷೆಯಿದೆ. ಉಳಿದಂತೆ ಜೆಡಿಎಸ್, ಸಿಪಿಐಎಂ, ಎಸ್‌ಡಿಪಿಐ ಕೂಡ ಅಭ್ಯರ್ಥಿ ಆಯ್ಕೆಯ ಅಂತಿಮ ಕಸರತ್ತಿನಲ್ಲಿದೆ.